ಜ.24 ರಂದು ಕುಶಾಲನಗರದಲ್ಲಿ “ಡಾ.ಪ್ರಕಾಶ್ ಬಡವನಹಳ್ಳಿ ನುಡಿ ನಮನ” ಕಾರ್ಯಕ್ರಮ

20/01/2021

ಮಡಿಕೇರಿ ಜ.20 : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಪ್ರಕಾಶ್ ಬಡವನಹಳ್ಳಿ ಗೆಳೆಯರ ವತಿಯಿಂದ ಜ.24 ರಂದು ಕುಶಾಲನಗರದಲ್ಲಿ “ಡಾ.ಪ್ರಕಾಶ್ ಬಡವನಹಳ್ಳಿ ನುಡಿ ನಮನ” ಕಾರ್ಯಕ್ರಮ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಅಂದು ಬೆಳಗ್ಗೆ 10 ಗಂಟೆಗೆ ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಉದ್ಘಾಟಿಸಲಿದ್ದಾರೆ. ಬಾಳೆಲೆಯ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಜೆ.ಸೋಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ವಿಮರ್ಶಕರಾದ ಪ್ರೊ. ರಹಮತ್ ತರೀಕೆರೆ, ಪ್ರೊ. ರಾಜಪ್ಪ ದಳವಾಯಿ, ಹಿರಿಯ ಸಾಹಿತಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ ನುಡಿನಮನ ಸಲ್ಲಿಸಲಿದ್ದಾರೆ.
ಪ್ರಮುಖರಾದ ಡಾ.ಸುಕನ್ಯಾ ಪ್ರಕಾಶ್, ಬಿ.ಎಸ್.ಲೋಕೇಶ್ ಸಾಗರ್, ಡಾ.ಡಿ.ದೇವರಾಜ್, ಡಾ.ಹೆಚ್.ಆರ್.ಸ್ವಾಮಿ, ಡಾ.ಜಿ.ವಿ.ಆನಂದಮೂರ್ತಿ, ಡಾ.ತುಕಾರಾಂ, ಭಾರಧ್ವಾಜ್ ಕೆ.ಆನಂದತೀರ್ಥ, ಯು.ಎಸ್.ಮಹೇಶ್, ಎಂ.ಇ.ಮೊಹಿದ್ದೀನ್ ಪಾಲ್ಗೊಳ್ಳಲಿದ್ದು, ಕು.ಶ್ರವಂತಿ ಪ್ರಕಾಶ್ ಆಶಯ ಗೀತೆಗಳನ್ನಾಡಲಿದ್ದಾರೆ ಎಂದರು.
ಬಳಗದ ಉಪಾಧ್ಯಕ್ಷ ಎಂ.ಇ.ಮೊಹಿದ್ದೀನ್ ಮಾತನಾಡಿ ಡಾ.ಪ್ರಕಾಶ್ ಬಡವನಹಳ್ಳಿ ಅವರ ಬಗ್ಗೆ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಕಡ್ಲೆರ ತುಳಸಿ ಮೋಹನ್, ನಿರ್ದೇಶಕರುಗಳಾದ ಮುನೀರ್ ಅಹಮ್ಮದ್, ಕೆ.ಟಿ.ಬೇಬಿಮ್ಯಾಥ್ಯು ಹಾಗೂ ವಿಲ್ಫ್ರೆಡ್ ಕ್ರಾಸ್ತ ಉಪಸ್ಥಿತರಿದ್ದರು.