ವಿರಾಜಪೇಟೆಯಲ್ಲಿ ಯುವ ಸಪ್ತಾಹ ಸಮಾರೋಪ : ಸ್ವಾಮಿ ವಿವೇಕಾನಂದರ ಆದರ್ಶ ಸಾರ್ವಕಾಲಿಕವಾದದ್ದು-ಡಾ. ಪೂವಮ್ಮ

January 20, 2021

ಪೊನ್ನಂಪೇಟೆ, ಜ.20: ತಮ್ಮ ಜೀವನದಲ್ಲಿ ಒಮ್ಮೆಯಾದರೂ ತಪ್ಪೆಸಗದೆ ಬದುಕಿ ಜಗತ್ತಿನ ಸ್ಫೂರ್ತಿಯ ಸೆಲೆಯಾದ ಸ್ವಾಮಿ ವಿವೇಕಾನಂದರ ಆದರ್ಶ ಸಾರ್ವಕಾಲಿಕವಾದದ್ದು. ಅವರು ಪ್ರತಿಪಾದಿಸಿದ ತತ್ವಗಳು ಇಂದಿನ ಸಮಾಜಕ್ಕೆ ಹೆಚ್ಚು ಪ್ರಸ್ತುತವೆನಿಸುತ್ತಿದೆ ಎಂದು ವಿರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಎಸ್. ಪೂವಮ್ಮ ಅವರು ಅಭಿಪ್ರಾಯಪಟ್ಟಿದ್ದಾರೆ.

ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ( ನಿಸರ್ಗ ಜೆಸಿಸ್) ಘಟಕದ ವತಿಯಿಂದ ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತವಾಗಿ ವಿರಾಜಪೇಟೆಯ ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಯುವ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಸ್ವಾಮಿ ವಿವೇಕಾನಂದರು ತಾವು ಹೆಸರುವಾಸಿಯಾಗಲೆಂದು ಬಯಸಿ ಸಾಧನೆ ಮಾಡಿದವರಲ್ಲ. ಅವರ ನಿಷ್ಕಳಂಕ ವ್ಯಕ್ತಿತ್ವವೇ ಅವರನ್ನು ಆಕರ್ಷಕ ವ್ಯಕ್ತಿಯನ್ನಾಗಿ ರೂಪಿಸಿತು ಎಂದು ಗುಣಗಾನ ಮಾಡಿದರು.

ಅತಿ ಕಡಿಮೆ ವಯಸ್ಸಿನವರೆಗೆ ಮಾತ್ರ ಬದುಕಿದ್ದ ಸ್ವಾಮಿ ವಿವೇಕಾನಂದರು ‘ಕಪಟವರಿಯದ ಜಗದ ಸಂತ’ ಎಂದು ಕರೆಸಿಕೊಂಡಿರುವುದು ಭಾರತಕ್ಕೆ ಹೆಮ್ಮೆ ಮೂಡಿಸಿದ ವಿಚಾರವಾಗಿದೆ. ಇಂದಿನ ಯುವ ಸಮೂಹಕ್ಕೆ ಸ್ವಾಮಿ ವಿವೇಕಾನಂದರ ಆದರ್ಶಕ್ಕಿಂತ ಮಿಗಿಲಾಗಿದ್ದು ಯಾವುದು ಇಲ್ಲ. ಸ್ವಾಮಿ ವಿವೇಕಾನಂದರ ಆದರ್ಶದಲ್ಲಿ ದೊರೆಯುವ ಪ್ರೇರಣೆಗೆ ಯಾರಿಂದಲೂ ಬೆಲೆ ಕಟ್ಟಲು ಅಸಾಧ್ಯ ಎಂದು ಹೇಳಿದ ಡಾ.ಪೂವಮ್ಮ ಅವರು, ಇಡೀ ಜಗತ್ತೇ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವಕ್ಕೆ ತಲೆಬಾಗುತಿದೆ. ವಿದ್ಯಾರ್ಥಿಗಳಿಗೆ ಇದಕ್ಕಿಂತ ದೊಡ್ಡ ಸ್ಪೂರ್ತಿ ಮತ್ತೊಂದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಚೆಟ್ಟಳ್ಳಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಬಿ.ಎಸ್. ಮೋಹನ್ ಕುಮಾರ್ ಅವರು, ವಿದ್ಯಾರ್ಥಿಗಳು ಈಗಿನಿಂದಲೇ ತಮ್ಮ ಗುರಿಯನ್ನು ನಿಖರ ಪಡಿಸಿಕೊಳ್ಳಬೇಕು. ಶಿಸ್ತು, ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಈ ಗುರಿ ಮುಟ್ಟಲು ಪ್ರಯತ್ನಿಸಬೇಕು. ಜೀವನದಲ್ಲಿ ಗುರಿ ಮುಟ್ಟಲು ಅಸಾಧ್ಯವಾದರೆ ಬದುಕೇ ಅಪೂರ್ಣವಾಗುತ್ತದೆ. ಇದನ್ನು ಸ್ವಾಮಿ ವಿವೇಕಾನಂದರು 158 ವರ್ಷಗಳ ಹಿಂದೆಯೇ ಹೇಳಿದ್ದರು. ವಿವೇಕಾನಂದರು ಅಂದು ಹೇಳಿದ್ದ ವಿಚಾರದಾರೆಗಳು ಇಂದು ಹೆಚ್ಚು ಮೌಲ್ಯಯುತವಾಗುತ್ತಿದೆ ಎಂದು ಹೇಳಿದರು.

ಆತ್ಮವಿಶ್ವಾಸದ ಕೊರತೆಯ ಬಗ್ಗೆ ಸ್ವಾಮಿ ವಿವೇಕಾನಂದರು ಅಂದೇ ಸಾಕಷ್ಟು ಚಿಂತಿತರಾಗಿದ್ದರು. ಯುವ ಸಮೂಹಕ್ಕೆ ತೀರಾ ಅಗತ್ಯವಾಗಿರುವ ಆತ್ಮವಿಶ್ವಾಸ ತುಂಬುವ ಬಗ್ಗೆ ಅವರ ಸಾಕಷ್ಟು ವಿಚಾರಧಾರೆಗಳು ಬೆಳಕು ಚೆಲ್ಲಿವೆ. ಇಂದು ಚಿಕ್ಕ ಪುಟ್ಟ ವಿಷಯಗಳಿಗೆ ಕೆಲವು ಯುವಕ- ಯುವತಿಯರು ತಮ್ಮ ಬದುಕನ್ನು ಅಂತ್ಯ ಗೊಳಿಸುತ್ತಿರುವ ಸುದ್ದಿಗಳನ್ನು ಗಮನಿಸುತ್ತಿದ್ದೇವೆ. ಇದರಿಂದ ಕೆಲ ಯುವ ಶಕ್ತಿಗಳನ್ನು ಸಮಾಜ ಕಳೆದುಕೊಳ್ಳುವಂತಾಗಿದೆ. ಆದರೆ ಇದಕ್ಕೆಲ್ಲಾವು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳಲ್ಲಿ ಸೂಕ್ತ ಪರಿಹಾರಗಳಿವೆ. ಆತ್ಮವಿಶ್ವಾಸದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂಬುದು ವಿವೇಕಾನಂದರ ಆದರ್ಶದ ಮೂಲ ಆಶಯ ಎಂದು ಹೇಳಿದರಲ್ಲದೆ, ದೇಶದಲ್ಲಿ ಅತಿಯಾಗಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಯುವಕರು ಹೆಚ್ಚಾಗಿ ರಾಜಕೀಯ ಪ್ರವೇಶಿಸಬೇಕು ಎಂದು ಮೋಹನ್ ಕುಮಾರ್ ಅವರು ಕರೆ ನೀಡಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ.ಸಿ.ಐ.ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷರಾದ ಎಂ.ಎನ್. ವನಿತ್ ಕುಮಾರ್ ಅವರು ಮಾತನಾಡಿ, ಇಂದು ವಿದ್ಯಾರ್ಥಿಗಳು ಪರೀಕ್ಷೆಗಾಗಿ ಮಾತ್ರ ಓದುವ ಮತ್ತು ಉದ್ಯೋಗಕ್ಕೋಸ್ಕರ ಮಾತ್ರ ಪದವಿ ಪಡೆಯುವ ಮನೋಸ್ಥಿತಿಯಲ್ಲಿದ್ದಾರೆ. ಇದು ದೇಶದ ಇಂದಿನ ದುರಂತ ಎಂದು ಅಭಿಪ್ರಾಯಪಟ್ಟರಲ್ಲದೆ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಯುವ ಸಮೂಹದ ಶಕ್ತಿಯನ್ನು ಆ ರಾಷ್ಟ್ರ ಬಳಸಿಕೊಳ್ಳಲು ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಉತ್ತಮ ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ತಾಯಿಯಂದಿರಿಗೆ ಮಹಾತಾಯಿ ಎಂಬ ಗೌರವ ನೀಡುವ ಪದ್ಧತಿ ಹಲವು ರಾಷ್ಟ್ರಗಳಲ್ಲಿ ಇದೆ. ಯುವ ಸಮೂಹ ರಾಷ್ಟ್ರೀಯ ಸಂಪತ್ತು ಎಂಬುದು ಕೇವಲ ಘೋಷ ವಾಕ್ಯಕ್ಕೆ ಮಾತ್ರ ಸೀಮಿತವಾಗಬಾರದು. ಅದರ ನಿಜವಾದ ಶಕ್ತಿಯನ್ನು ರಾಷ್ಟ್ರನಿರ್ಮಾಣಕ್ಕೆ ಬಳಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಮಾಯಮುಡಿ ಶ್ರೀ ಕಾವೇರಿ ಯುವಕ ಸಂಘದ ಅಧ್ಯಕ್ಷರಾದ ಎಂ. ಜಿ. ಮಹೇಶ್ ಉಪಸ್ಥಿತರಿದ್ದರು. ಕೊಡಗು ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ, ಪೊನ್ನಂಪೇಟೆ ನಿಸರ್ಗ ಜೇಸಿಸ್ ನ ಪೂರ್ವಾಧ್ಯಕ್ಷರಾದ ಎ. ಎಸ್. ಟಾಟು ಮೊಣ್ಣಪ್ಪ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ನಿಸರ್ಗ ಜೇಸಿ ಘಟಕದ ಕೋಶಾಧಿಕಾರಿ ಕುಪ್ಪಂಡ ದಿಲನ್ ಬೋಪಣ್ಣ, ಕಾವೇರಿ ಯುವಕ ಸಂಘದ ಪದಾಧಿಕಾರಿಗಳಾದ ಅರುಣ್, ಪಾಪಣ್ಣ, ಕಾವೇರಿ ಕಾಲೇಜಿನ ಉಪನ್ಯಾಸಕರಾದ ಆನಂದ್ ಕಾರ್ಲ, ಶಂಕರ್ ನಾರಾಯಣ್, ಅಂಬಿಕ, ಪ್ರವೀಣ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

error: Content is protected !!