ಕೊಡಗಿನ ಒಟ್ಟು 1,10,216 ಕುಟುಂಬಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆದುಕೊಂಡಿವೆ

January 20, 2021

ಮಡಿಕೇರಿ ಜ.20 : “ಹಸಿವು ಮುಕ್ತ ಕರ್ನಾಟಕ”ದ ದ್ಯೇಯದೊಂದಿಗೆ ಪ್ರಾರಂಭಗೊಂಡ “ಅನ್ನಭಾಗ್ಯ ಯೋಜನೆ”ಯು ಸರ್ಕಾರದ ಮಹತ್ವಾಂಕ್ಷಿ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 1,10,216 ಕುಟುಂಬಗಳು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಈ ಯೋಜನೆಯಂತೆ ಆದ್ಯತಾ (ಅಂತ್ಯೋದಯ) ಪ್ರತೀ ಪಡಿತರ ಚೀಟಿದಾರರಿಗೆ 35 ಕೆ.ಜಿ ಅಕ್ಕಿ ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿಯ ಪ್ರತೀ ಸದಸ್ಯರಿಗೆ 5 ಕೆ.ಜಿ ಅಕ್ಕಿಯನ್ನು ಹಾಗೂ ಆದ್ಯತಾ (ಬಿಪಿಎಲ್) 02 ಕೆ.ಜಿ ಗೋಧಿಯನ್ನು ಸರ್ಕಾರದಿಂದ ಉಚಿತವಾಗಿ ವಿತರಿಸಲಾಗುತ್ತಿದೆ.

ಈ “ಅನ್ನಭಾಗ್ಯ ಯೋಜನೆ”ಯನ್ನು ಆದ್ಯತೇತರ(ಎಪಿಎಲ್) ಪಡಿತರ ಚೀಟಿದಾರರಿಗೂ ಕೂಡ ವಿಸ್ತರಣೆ ಮಾಡಲಾಗಿದ್ದು, ಪಡಿತರಕ್ಕಾಗಿ ನೊಂದಾವಣೆ ಮಾಡಿಕೊಂಡಂತಹ 21616 ಆದ್ಯತೇತರ(ಎಪಿಎಲ್) ಪಡಿತರ ಚೀಟಿದಾರರಿಗೆ ಕೂಡ 1 ಯೂನಿಟ್ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ, ಎರಡು ಹಾಗೂ ಎರಡಕ್ಕಿಂತ ಹೆಚ್ಚು ಯೂನಿಟ್ ಇರುವ ಪಡಿತರ ಚೀಟಿಗೆ 10 ಕೆ.ಜಿ ಅಕ್ಕಿಯನ್ನು ಪ್ರತೀ ಕೆ.ಜಿಗೆ ರೂ 15.00ರಂತೆ ಪಡೆದು ನೀಡಲಾಗುತ್ತಿದೆ.

 ಸರ್ಕಾರವು ಜಿಲ್ಲೆಯಲ್ಲಿರುವ 3034 ಆದ್ಯತಾ (ಬಿಪಿಎಲ್) ಅನಿಲ ರಹಿತ ಪಡಿತರ ಚೀಟಿದಾರರಿಗೆ 3 ಲೀಟರ್‍ನಂತೆ ಹಾಗೂ ಗ್ಯಾಸ್ ಹೊಂದಿರುವ ಎಲ್ಲಾ ವರ್ಗದ 61475 ಪಡಿತರ ಚೀಟಿದಾರರು ಸೀಮೆಎಣ್ಣೆಗಾಗಿ ನೋಂದಾಯಿಸಿಕೊಂಡಿದ್ದು, ಲೀಟರ್‍ಗೆ ರೂ.35 ರಂತೆ ವಿತರಿಸಲಾಗುತ್ತಿದೆ.

ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರದ “ಪಿಎಂಜಿಕೆಎವೈ ಯೋಜನೆ”ಯಡಿ ಏಪ್ರಿಲ್ 2020ರ ಮಾಹೆಯಿಂದ ನವೆಂಬರ್-2020ರ ಮಾಹೆಯವರೆಗೆ ಜಿಲ್ಲೆಯ ಆದ್ಯತಾ ಕುಟುಂಬದ (ಬಿಪಿಎಲ್ ಮತ್ತು ಎಎವೈ) ಪ್ರತೀ ಸದಸ್ಯರಿಗೆ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. 2020 ಜುಲೈ ತಿಂಗಳಿನಿಂದ ನವೆಂಬರ್‍ವರೆಗೆ ಪ್ರತೀ ಆದ್ಯತಾ ಕುಟುಂಬದ ಪಡಿತರ ಚೀಟಿ ಕುಟುಂಬಗಳಿಗೆ 1 ಕೆ.ಜಿ ಕಡಲೆ ಕಾಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ ಎಂದು ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

error: Content is protected !!