ಅರಣ್ಯ ಇಲಾಖೆ ಜೀಪನ್ನೇ ಕಾಡಿದ ಕಾಳಿಂಗ : ಕೊಯನಾಡಿನಲ್ಲಿ ಸರ್ಪ ಸರೆ

January 20, 2021

ಮಡಿಕೇರಿ ಜ.20 : ಅರಣ್ಯ ಇಲಾಖೆಯ ಜೀಪನ್ನೇ ಕಾಡಿದ ಬೃಹತ್ ಗಾತ್ರದ ಕಾಳಿಂಗಸರ್ಪವೊಂದನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.
ಕೊಯನಾಡು ಸಮೀಪ ಹೆದ್ದಾರಿಯ ಮಧ್ಯಭಾಗದಲ್ಲಿ ಸಾಗುತ್ತಿದ್ದ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪ ಇದ್ದಕ್ಕಿದ್ದಂತೆ ಅರಣ್ಯ ಇಲಾಖೆಯ ಜೀಪ್‍ನಲ್ಲಿ ಸೇರಿಕೊಂಡಿತು. ದಿಕ್ಕು ತೋಚದಾದ ಅಧಿಕಾರಿಗಳು ತಕ್ಷಣ ಹಾಕತ್ತೂರಿನ ಸ್ನೇಕ್ ಪಿಯೂಷ್ ಪೆರೇರಾ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದರು.
ಕೊಯನಾಡಿಗೆ ಬಂದ ಪೆರೇರಾ ಅವರು ಸುಮಾರು ಒಂದೂವರೆ ಗಂಟೆಗಳ ಹರಸಾಹಸದ ನಂತರ ಜೀಪ್‍ನಿಂದ ಕಾಳಿಂಗ ಸರ್ಪವನ್ನು ಹೊರ ತೆಗೆದರು. ನಂತರ ಅರಣ್ಯ ಅಧಿಕಾರಿಗಳ ಸಹಕಾರದೊಂದಿಗೆ ಕಾಳಿಂಗನನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ಸಂಪಾಜೆ ಹಾಗೂ ಕೊಯನಾಡು ವಲಯದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಸಂದರ್ಭ ಹಾಜರಿದ್ದರು. ಪಿಯೂಷ್ ಪೆರೇರಾ ಅವರ ಪ್ರಯತ್ನದ ಬಗ್ಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾವುಗಳು ಎಲ್ಲೇ ಕಂಡು ಬಂದರೂ ಅವುಗಳನ್ನು ಕೊಲ್ಲದೆ ತಮಗೆ ಕರೆ ಮಾಡುವಂತೆ (ಮೊ.ಸಂ : 94819 52253) ಪಿಯೂಷ್ ಪೆರೇರಾ ಮನವಿ ಮಾಡಿದ್ದಾರೆ.

error: Content is protected !!