ಸೋಮವಾರಪೇಟೆ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಸಭೆ : ಪ್ರಶಸ್ತಿ ಪ್ರದಾನ

January 20, 2021

ಮಡಿಕೇರಿ ಜ. 20 : ಸೋಮವಾರಪೇಟೆ ಪತ್ರಿಕಾಭವನದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಸಂಘದ ಅಧ್ಯಕ್ಷ ಎಚ್.ಆರ್. ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್.ಸವಿತ ರೈ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ಕಾರ್ಯನಿರತ ಗ್ರಾಮೀಣ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯ ಸಿಗಬೇಕು ಎಂದು ಆಗ್ರಹಿಸಿದರು. ಆದರೆ ಇದುವರಗೆ ಗ್ರಾಮೀಣ ಪತ್ರಕರ್ತರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕವನ್ ಕಾರ್ಯಪ್ಪ ಅವರು ಸ್ಥಾಪಿಸಿರುವ ಮಾನವೀಯ ವರದಿಗೆ ಕೂಡಿಗೆಯ ‘ಶಕ್ತಿ’ವರದಿಗಾರ ಕೆ.ಕೆ. ನಾಗರಾಜ ಶೆಟ್ಟಿ, ಬಿ.ಎಸ್. ಲೋಕೇಶ್ ಸಾಗರ್ ಅವರು ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ ಪರಿಸರ ವನ್ಯಜೀವಿ ಪ್ರಶಸ್ತಿಗೆ ‘ಪ್ರಜಾಸತ್ಯ’ ಪತ್ರಿಕೆಯ ಸೋಮವಾರಪೇಟೆ ವರದಿಗಾರ ಹೆಚ್.ಈ. ರವಿ, ಎಸ್.ಎ. ಮುರುಳೀಧರ್ ಅವರು ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಗೆ ಸುಂಟಿಕೊಪ್ಪದ ‘ಪ್ರಜಾವಾಣಿ’ ವರದಿಗಾರ ಎಂ.ಎಸ್. ಸುನಿಲ್, ಎಚ್.ಆರ್. ಹರೀಶ್ ಕುಮಾರ್ ಅವರು ಸ್ಥಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಗೆ ಶನಿವಾರಸಂತೆ ವಿಭಾಗದ ‘ವಿಜಯಕರ್ನಾಟಕ’ ಪತ್ರಿಕೆ ವರದಿಗಾರ ಚೆರಿಯಮನೆ ಸುರೇಶ್, ಎಂ.ಎನ್. ಚಂದ್ರಮೋಹನ್ ಅವರು ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿಗೆ ‘ಶಕ್ತಿ’ಯ ಸೋಮವಾರಪೇಟೆ ತಾಲ್ಲೂಕು ವರದಿಗಾರ ವಿಜಯ್ ಹಾನಗಲ್ ಅವರಿಗೆ ಅತಿಥಿಗಳಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಸಂದರ್ಭ ಸಾಧಕ ಪತ್ರಕರ್ತರುಗಳಾದ ಎಸ್.ಮಹೇಶ್, ಕರುಣ್ ಕಾಳಯ್ಯ, ವಿಶ್ವ ಕುಂಬೂರು, ಹಿರಿಕರ ರವಿ, ವಿಘ್ನೇಶ್ ಎಂ. ಬೂತನಕಾಡು, ಕವನ್ ಕಾರ್ಯಪ್ಪ, ಷಂಶುದ್ದೀನ್ ಅವರುಗಳನ್ನು ಸನ್ಮಾನಿಸಲಾಯಿತು. ವಿಶೇಷವಾಗಿ ತಹಶೀಲ್ದಾರ್ ಆರ್. ಗೋವಿಂದರಾಜು, ಉದ್ಯಮಿ ಪವನ್ ದೇವಯ್ಯ, ಕಾಫಿ ಬೆಳೆಗಾರರಾದ ಮಧು ಹಾಗೂ ಯಶಸ್ವಿನಿ ಮಂಜುನಾಥ್ ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯ ಎ.ಆರ್. ಕುಟ್ಟಪ್ಪ, ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಎ.ಮುರುಳೀಧರ್, ವೀಕ್ಷಕರಾಗಿ ಆಗಮಿಸಿದ್ದ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪಾರ್ಥ ಚಿಣ್ಣಪ್ಪ, ತಾಲೂಕು ಸಂಘದ ಖಜಾಂಚಿ ಬಿ.ಎ.ಭಾಸ್ಕರ್ ಮತ್ತಿತರರು ಇದ್ದರು. ಇದೇ ಸಂದರ್ಭ ತಾಲೂಕು ಪತ್ರಕರ್ತರ ಸಂಘದ ದತ್ತಿ ನಿಧಿಗೆ ಉದ್ಯಮಿ ನಾಪಂಡ ಪವನ್ ದೇವಯ್ಯ ಒಂದು ಲಕ್ಷ ರೂ.ಗಳನ್ನು ನೀಡಿದರು.

error: Content is protected !!