ರಾಜಧಾನಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ : ರಾಜಭವನ ಮುತ್ತಿಗೆಗೆ ಯತ್ನ

January 21, 2021

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಬುಧವಾರ ಬೃಹತ್ ಪ್ರತಿಭಟನೆಯನ್ನು ನಡೆಸಿತು. ನಗರ ರೈಲ್ವೇ ನಿಲ್ದಾಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾದರು.

ಬೆಳಗ್ಗೆ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಸ್‌ಆರ್‌ ಪಾಟೀಲ್, ದಿನೇಶ್ ಗುಂಡೂರಾವ್, ಜಿ. ಪರಮೇಶ್ವರ್‌ ಹಾಗೂ ಮತ್ತಿತರರು ಭಾಗಿಯಾಗಿದ್ದರು.

ರೈತರ ಪರವಾಗಿ ಘೋಷಣೆ ಕೂಗಿದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಕೂಡಲೇ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ರೈತರಿಗೆ ಬೆಂಬಲವಾಗಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಟ್ರಾಕ್ಟರ್‌ನಲ್ಲಿ ಕುಳಿತುಕೊಂಡು ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ಮೂಲಕ ಬಂದರು. ತಲೆಗೆ ಹಸಿರು ಶಾಲು ತೊಟ್ಟ ಸಿದ್ದರಾಮಯ್ಯ, ಡಿಕೆಶಿ, ರಾಮಲಿಂಗ ರೆಡ್ಡಿ, ಎಂಬಿ ಪಾಟೀಲ್ ಗಮನ ಸೆಳೆದರು.

ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಕೃಷಿ ಕ್ಷೇತ್ರಕ್ಕೆ ಮಾರಕವಾದ ಕಾಯಿದೆಗಳನ್ನು ವಾಪಸ್ ಪಡೆಯದಿದ್ದರೆ ರೈತರು ದಂಗೆ ಏಳುವುದು ಖಚಿತ ಎಂದು ಎಚ್ಚರಿಕೆ ನೀಡಿದರು.

ರೈತರು ಅನ್ನದಾತರು. ಈ ಕಾನೂನುಗಳಿಂದ ಎಂಎಸ್‍ಪಿ ನಿಂತು ಹೋಗಲಿದೆ. ಕೃಷಿ ಮಾರುಕಟ್ಟೆಗಳು ನಾಶವಾಗಲಿವೆ. ಅದಾನಿ, ಅಂಬಾನಿಯಂತಹ ಬಂಡವಾಳಶಾಹಿಗಳಿಗೆ ಮಣಿದು, ಅವರಿಗೆ ಗುಲಾಮರಾಗಿ ಕೇಂದ್ರ ಸರ್ಕಾರ ನಡೆಸುವವರು ಈ ಕಾಯಿದೆಗಳನ್ನು ಜಾರಿಗೆ ತಂದಿದ್ದಾರೆ. ಇದನ್ನು ವಿರೋಧಿಸಬೇಕಿದೆ ಎಂದರು.

ಇನ್ನು ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಮಾತನಾಡಿ, ಹಸಿರು ಕ್ರಾಂತಿ, ಆಹಾರದ ಹಕ್ಕು ಕಾಯ್ದೆಗಳು ಕಾಂಗ್ರೆಸ್‌ ಹಾಗೂ ಯುಪಿಎ ಸರ್ಕಾರದ ಅವಧಿಯಲ್ಲಿ ಬಂದಿವೆ. ಆದರೆ ಇಂದು ಅನ್ನ ಕೊಟ್ಟ ರೈತನನ್ನು ಬೀದಿಗೆ ಇಳಿಸುವ ಪರಿಸ್ಥಿತಿ ಬಂದಿದೆ. ಕೃಷಿ ಕ್ಷೇತ್ರದಲ್ಲಿ 60 ಭಾಗ ಕಾರ್ಮಿಕ ವರ್ಗ ಕೆಲಸ ಮಾಡುತ್ತಿದೆ. ಅವರೆಲ್ಲಾ ನಿರುದ್ಯೋಗಿಗಳಾದರೆ ಪರಿಸ್ಥಿತಿಗೆ ಹೇಗಿರುತ್ತದೆ ಎಂದು ಪ್ರಶ್ನಿಸಿದರು.

ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನಾ ಸಮಾವೇಶದ ಬಳಿಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ರಾಜಭವನ ಮುತ್ತಿಗೆ ಹಾಕಲು ಮುಂದಾದರು. ಆದರೆ ಪೊಲೀಸರು ಇದಕ್ಕೆ ಅವಕಾಶ ಕೊಡಲಿಲ್ಲ. ಮೊದಲ ಹಂತದ ಬ್ಯಾರಿಕೇಡ್‌ ದಾಟಿ ಮುಂದಕ್ಕೆ ಸಾಗಿದ ಕಾರ್ಯಕರ್ತರು ಹಾಗೂ ಮುಖಂಡರನ್ನು ಪೊಲೀಸರು ಬಳಿಕ ವಶಕ್ಕೆ ಪಡೆದುಕೊಂಡರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸಲೀಂ ಅಹಮ್ಮದ್ ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

error: Content is protected !!