ಜ.24ರಂದು ಕುಂಜಿಲದಲ್ಲಿ ಸಾಮೂಹಿಕ ವಿವಾಹ- ಮನೆ ಹಸ್ತಾಂತರ

21/01/2021

ಮಡಿಕೇರಿ ಜ.21 : ಕುಂಜಿಲ ಪಯ್‍ನರಿ ರಿಲೀಫ್ ಫಂಡ್ ವತಿಯಿಂದ ಜ.24 ರಂದು ಕುಂಜಿಲದ ಬದ್ರಿಯಾ ನಗರದ ರೌಳತುಲ್ ಉಲೂಂ ಮದ್ರಸದ ಅಂಗಣದಲ್ಲಿ ಬಡ ಹೆಣ್ಣುಮಕ್ಕಳ ‘ಸಾಮೂಹಿಕ ವಿವಾಹ’ ಸಮಾರಂಭ ಹಾಗೂ ಸಂತ್ರಸ್ತರೊಬ್ಬರಿಗೆ ನೂತನವಾಗಿ ನಿರ್ಮಿಸಿದ ಮನೆಯನ್ನು ಹಸ್ತಾಂತರ ಮಾಡಲಾಗುತ್ತದೆಂದು ರಿಲೀಫ್ ಫಂಡ್‍ನ ಮಾಜಿ ಕಾರ್ಯದರ್ಶಿ ವಿ.ಎ. ಸಿರಾ ವಯಕೋಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಕುಂಜಿಲದ ಪಯ್‍ನರಿ ಜಮಾಅತ್ ನೇತೃತ್ವದಲ್ಲಿ ಬಹುಮಾನ್ಯ ಕೂರತ್ ತಂಙಳ್‍ರ ನಿರ್ದೇಶನದಂತೆ ಪಯ್‍ನರಿ ರಿಲೀಫ್ ಫಂಡ್ ಆರಂಭವಾಯಿತು. ಇದೀಗ ರಿಲೀಫ್ ಫಂಡ್‍ನಿಂದ 13ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಎರಡು ಜೋಡಿಗಳ ವಿವಾಹವನ್ನು ನೆರವೇರಿಸಲಾಗುತ್ತದೆ. ಪ್ರತಿ ಜೋಡಿಗೆ ತಲಾ 4 ಲಕ್ಷ ರೂ.ಗಳಂತೆ ಒಟ್ಟು 8 ಲಕ್ಷ ರೂ. ವೆಚ್ಚದಲ್ಲಿ ಚಿನ್ನಾಭರಣ ಊಟೋಪಚಾರವನ್ನು ನೀಡಲಾಗುತ್ತದೆ. ಇಲ್ಲಿಯವರೆಗೆ ಅಂದಾಜು 60 ಜೋಡಿಗಳ ವಿವಾಹವನ್ನು ಸಂಸ್ಥೆ ನಡೆಸಿಕೊಟ್ಟಿದೆಯೆದಂದು ಮಾಹಿತಿಯನ್ನಿತ್ತರು.
ಇದೇ ಸಮಾರಂಭದಲ್ಲಿ ಸಂತ್ರಸ್ತ ವ್ಯಕ್ತಿಯೊಬ್ಬರಿಗೆ ರಿಲೀಫ್ ಫಂಡ್‍ನಿಂದ 4 ಲಕ್ಷ ಅಂದಾಜು ವೆಚ್ಚದಲ್ಲಿ ಕುಂಜಿಲದಲ್ಲಿ ನಿರ್ಮಿಸಿರುವ ಮನೆಯನ್ನು ಕೀಯನ್ನು ನೀಡುವ ಮೂಲಕ ಹಸ್ತಾಂತರಿಸಲಾಗುತ್ತದೆಂದು ವಿವರಗಳನ್ನಿತ್ತರು.
ಸಮಾರಂಭವನ್ನು ಕುಂಜಿಲ ಮುದರ್ರಿಸ್ ರೌಳತುಲ್ ಉಲೂಂ ದರ್ಸ್‍ನ ಮುಬಶ್ಶಿರ್ ಅಹ್ಸನಿ ಅಲ್‍ಕಾಮಿಲಿ ಉದ್ಘಾಟಿಸಲಿದ್ದಾರೆ.ಪಯ್‍ನರಿ ಸುನ್ನೀ ಮುಸ್ಲಿಂ ಜಮಾಅತ್‍ನ ಅಧ್ಯಕ್ಷ ಶೌಕತ್ ಅಲಿ ಮಕ್ಕಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಾಂತಪುರಂನ ಅಬ್ದುಲ್ಲತೀಫ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದು, ಕಣ್ಣೂರಿನ ಮರ್ಕಝಲ್ ಹುದಾ ಪ್ರಾಂಶುಪಾಲ ಅಲ್‍ಹಾಜ್ ಅಬ್ದುರಷೀದ್ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವ ಅಸಯ್ಯಿದ್ ಫಝಲ್ ಕೊಯಮ್ಮ ಅಲ್‍ಬುಖಾರಿ ಅವರ ನೇತೃತ್ವದಲ್ಲಿ ದಿಖ್ರ್ ಹಲ್ಖಾ ಮತ್ತು ದುಆ ಮಜ್ಲಿಸ್ ನಡೆಯಲಿದೆ. ಅತಿಥಿಗಳಾಗಿ ಕೊಡಗು ಜಿಲ್ಲಾ ನಾಯಿಬ್ ಖಾಝಿ ಅಲ್‍ಹಾಜ್ ಮಹ್‍ಮೂದ್ ಮುಸ್ಲಿಯಾರ್, ಅಲ್‍ಹಾಜ್ ಅಬ್ದುಲ್ಲ ಫೈಝಿ, ಕುಂಜಿಲ ರಿಲೀಫ್ ಸಮಿತಿ ಅಧ್ಯಕ್ಷ ಅಹ್ಮದ್ ಬಶೀರ್ ಪೊಯಕರೆ ಪಾಲ್ಗೊಳ್ಳಲಿದ್ದಾರೆ ಎಂದರು.
ರಿಲೀಫ್ ಫಂಡ್‍ನಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಬಡ ಮಂದಿಯ ಚಿಕಿತ್ಸೆಗೆ ಅಗತ್ಯ ನೆgವನ್ನು ನೀಡಲಾಗುತ್ತಿದೆ. ಹೀಗೆ ಅನೇಕ ಜನಪರ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಿಲೀಫ್ ಫಂಡ್‍ನ ಅಧ್ಯಕ್ಷ ಪಿ.ಎ. ಬಶೀರ್ ಪೊಯಕ್ಕರೆ, ಮಾಜಿ ಅಧ್ಯಕ್ಷ ಕೆ.ಎ.ರಝಾಖ್ ಕುಂಡಂಡ, ಸಮಿತಿ ಸದಸ್ಯರಾದ ಕೆ.ಎಂ. ಮಾಮು ಕಂಜಿಲ ಉಪಸ್ಥಿತರಿದ್ದರು.