ಅರಣ್ಯವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ನಕಲಿ ಪರಿಸರವಾದಿಗಳು ಅಡ್ಡಿ : ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ ಆರೋಪ

January 21, 2021

ಮಡಿಕೇರಿ ಜ.21 : ಜಿಲ್ಲೆಯ ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕೆಲವು ನಕಲಿ ಪರಿಸರವಾದಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಅವರು, ಈ ಕುರಿತು ಸರಕಾರದ ಗಮನಸೆಳೆಯಲಾಗಿದೆ ಎಂದು ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಅವರು ಸರಕಾರದ ಅರಣ್ಯ ಹಕ್ಕು ಕಾಯ್ದೆಯು ಅರಣ್ಯವಾಸಿಗಳ ಪರವಾಗಿದೆ. ಅರಣ್ಯವಾಸಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಸಲುವಾಗಿ ಸರಕಾರವು ಹಲವಾರು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಅರಣ್ಯವಾಸಿಗಳಿಗೆ ಪಡಿತರ ಸೇರಿದಂತೆ ಪೌಷ್ಠಿಕ ಆಹಾರ ವಸತಿ, ಉಚಿತ ಶಿಕ್ಷಣ, ಉಚಿತಗ್ಯಾಸ್, ವಿದ್ಯುತ್ ಸಂಪರ್ಕ, ಸೋಲಾರ್ ದೀಪಗಳು ಸೇರಿದಂತೆ ಅತ್ಯಗತ್ಯ ಮೂಲಭೂತ ಸೌಲಭ್ಯಗಳನ್ನು ಸರಕಾರ ಉಚಿತವಾಗಿ ಒದಗಿಸುವ ಮೂಲಕ ಅರಣ್ಯವಾಸಿಗಳ ಆರ್ಥಿಕ ಮಟ್ಟವನ್ನು ಉತ್ತಮಗೊಳಿಸಲು ವಿವಿಧ ಇಲಾಖೆಗಳ ಮೂಲಕ ಶ್ರಮಿಸುತ್ತಿದೆ. ಆದರೆ ಕೊಡಗು ಜಿಲ್ಲೆಯ ಹಲವೆಡೆಗಳಲ್ಲಿ ನಕಲಿ ಪರಿಸರವಾದಿಗಳು ಅರಣ್ಯವಾಸಿಗಳಿಗೆ ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡುತ್ತಿರುವುದು ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.
ವಾಸ್ತವವಾಗಿ ಅರಣ್ಯವನ್ನು ರಕ್ಷಿಸುವಲ್ಲಿ ಅರಣ್ಯವಾಸಿಗಳ ಕೊಡುಗೆ ಅಪಾರವಿದೆ. ಮರಗಳ್ಳರಿಂದಲೇ ಅರಣ್ಯಗಳು ನಾಶವಾಗುತ್ತಿದೆಯೇ ವಿನಃ ಅರಣ್ಯವಾಸಿಗಳಿಂದಲ್ಲ. ದಶಕಗಳಿಂದಲೂ ಅರಣ್ಯವಾಸಿಗಳು ವನ್ಯಜೀವಿ ಹಾಗೂ ಮರಗಿಡಗಳ ಜೊತೆಯಲ್ಲಿಯೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯವಾಸಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು, ಅರಣ್ಯ ಸಚಿವರು ಹಾಗೂ ಉಸ್ತುವಾರಿ ಸಚಿವರುಗಳ ಗಮನಕ್ಕೆ ತರಲಾಗಿದೆ ಎಂದು ಅವರು ರವಿಕುಶಾಲಪ್ಪ ತಿಳಿಸಿದ್ದಾರೆ.
ಸರಕಾರವು ಸಹ ಸಣ್ಣ ಪುಟ್ಟ ಕಾನೂನು ತೊಡಕುಗಳನ್ನು ಸರಿಪಡಿಸಿ ಅರಣ್ಯ ಸಂರಕ್ಷಣೆಯೊಂದಿಗೆ ಅರಣ್ಯವಾಸಿಗಳಿಗೂ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಒದಗಿಸಲು ಕಟಿಬದ್ಧವಾಗಿದೆ. ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಅರಣ್ಯವಾಸಿಗಳಿಗೆ ಕಿರುಕುಳ ನೀಡುತ್ತಿರುವ ನಕಲಿ ಪರಿಸರವಾದಿಗಳು ತಾವು ಅತಿಕ್ರಮಿಸಿಕೊಂಡಿರುವ ಪೈಸಾರಿ ಜಾಗ ಹಾಗೂ ತಮ್ಮ ಬಳಿ ಕೃಷಿ ಮಾಡದೆ ಬರಡು ಬಿಟ್ಟಿರುವ ಜಮೀನನ್ನು ಅರಣ್ಯವಾಸಿಗಳಿಗೆ ನೀಡುವ ಮೂಲಕ ನೈಜ ಕಾಳಜಿ ತೋರಲಿ. ಆ ಮೂಲಕ ಅರಣ್ಯವಾಸಿ ಬಡಜನರಿಗೆ ಸಹಾಯ ಮಾಡಲಿ ಎಂದೂ ಅವರು ಸಲಹೆ ಮಾಡಿದ್ದಾರೆ.

error: Content is protected !!