ಮಡಿಕೇರಿ ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಸಭೆ : ಅರ್ಜಿಗಳ ವಿಲೇವಾರಿ

21/01/2021

ಮಡಿಕೇರಿ ಜ. 21 : ಮಡಿಕೇರಿ ತಾಲ್ಲೂಕು ಅಕ್ರಮ ಸಕ್ರಮ ಸಮಿತಿಯ ಸಭೆಯು ಸಮಿತಿಯ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ನಗರದ ತಹಶೀಲ್ದಾರರ ಕಛೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾಗಮಂಡಲ ಹಾಗೂ ಸಂಪಾಜೆ ಹೋಬಳಿಗಳಿಂದ ಸಕ್ರಮಕ್ಕಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ 14 ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. ಹಕ್ಕುಪತ್ರ ನೀಡಲು ಮುಂದಿನ ಕ್ರಮಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಉಳಿದ ಅರ್ಜಿಗಳ ವಿಲೇವಾರಿಯನ್ನು ಫೆಬ್ರವರಿ 11 ರಂದು ನಡೆಯಲಿರುವ ಸಭೆಯಲ್ಲಿ ವಿಲೇವಾರಿ ಮಾಡಲು ತೀರ್ಮಾನಿಸಲಾಯಿತು. ಭಾಗಮಂಡಲ ಹೋಬಳಿಯಲ್ಲಿನ ಸಿ ಅಂಡ್ ಡಿ ಜಾಗ ಮತ್ತು ಅರಣ್ಯ ಇಲಾಖೆಯ ಜಾಗ ಹಾಗೂ ಪೈಸಾರಿ ಜಾಗಗಳ ನಿಖರ ಮಾಹಿತಿಗಾಗಿ ಜಂಟಿ ಸರ್ವೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಸರ್ವೆಯ ಬಳಿಕ ಹಕ್ಕುಪತ್ರ ನೀಡುವ ಕುರಿತು ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ತಹಶೀಲ್ದಾರ್ ಮಹೇಶ್, ಎ.ಸಿ.ಎಫ್ ದಯಾನಂದ್, ಸದಸ್ಯರಾದ ಕವಿತಾ ಪ್ರಭಾಕರ್, ಸುಬ್ರಹ್ಮಣ್ಯ ಉಪಾಧ್ಯಾಯ, ಮಿಟ್ಟು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಅಕ್ರಮ ಸಕ್ರಮ ಸಮಿತಿಯ ಸದಸ್ಯರುಗಳು ಪಾಲ್ಗೊಂಡಿದ್ದರು.