ರಾಷ್ಟ್ರೀಯ ಗ್ರಾಹಕರ ದಿನಾಚರಣೆ : ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಅಗತ್ಯ : ಎಂ.ಎಸ್. ರಾಮಚಂದ್ರ ಸಲಹೆ

January 21, 2021

ಮಡಿಕೇರಿ ಜ.21 : ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಹೊಂದಿದರೆ ಮಾರುಕಟ್ಟೆಯಲ್ಲಿ ವಸ್ತಗಳ ಖರೀದಿ, ಕಲಬೆರಿಕೆ ಬಗ್ಗೆ ಎಚ್ಚರವಹಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಎಂ.ಎಸ್ ರಾಮಚಂದ್ರ ಅವರು ಸಲಹೆ ಮಾಡಿದ್ದಾರೆ. .
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಕುಶಾಲನಗರ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ, ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಹೊಸ ವೈಶಿಷ್ಟ್ಯಗಳು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾರುಕಟ್ಟೆಯಲ್ಲಿ ಯಾವುದೇ ವಸ್ತುವನ್ನು ಕೊಂಡುಕೊಳ್ಳುವ ಮೊದಲು ಪರಿಶೀಲಿಸಬೇಕು. ಹಣಕೊಟ್ಟು ವಸ್ತುವನ್ನು ಪಡೆದುಕೊಳ್ಳುವುದರಿಂದಾಗಿ ಆ ವಸ್ತುವಿನ ಬಗ್ಗೆ ತಿಳಿದುಕೊಳ್ಳುವ ಹಕ್ಕು ಗ್ರಾಹಕರಿಗೆ ಇದೆ ಎಂದು ತಿಳಿಸಿದರು.
ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷರಾದ ಎ.ಎ.ಚಂಗಪ್ಪ ಅವರು ಮಾತನಾಡಿ ಪ್ರತಿ ಬಾರಿಯೂ ವಸ್ತುಗಳನ್ನು ಖರೀದಿಸಲು ಹೋದಾಗ ಎಚ್ಚರಿಕೆಯಿಂದಿರಬೇಕು. ವ್ಯಾಪಾರಿಗಳು ಕೆಲವು ಬಾರಿ ಗ್ರಾಹಕರ ಹಕ್ಕುಗಳನ್ನು ಕಸಿಯಲು ಯತ್ನಿಸುತ್ತಾರೆ. ಕೆಲವರು ತೂಕ ಮತ್ತು ಅಳತೆಯಲ್ಲಿ ವ್ಯಾಪಕ ಮೋಸ ಮಾಡುತ್ತಾರೆ. ಆಹಾರದಲ್ಲೂ ಸಹ ಕಲಬೆರಕೆ ಮಾಡುತ್ತಾರೆ. ಈ ರೀತಿಯ ಸಮಸ್ಯೆಗಳಾದರೆ ಕೂಡಲೇ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸುವಂತೆ ತಿಳಿಸಿದರು.
ಗಾಳಿಬೀಡು ಪ್ರೌಢಶಾಲೆಯ ಶಿಕ್ಷಕರಾದ ರಮೇಶ್ ಅವರು ಮಾತನಾಡಿ, ಪ್ರತಿದಿನವೂ ಸಹ ನಾವು ಗ್ರಾಹಕರಾಗಿರುತ್ತೇವೆ. ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದಿರಬೇಕು. ಗ್ರಾಹಕ ಮಾರುಕಟ್ಟೆಯ ರಾಜ ಇದ್ದಂತೆ. ಆತನ ಹಕ್ಕು ಎಂದರೆ ಕೊಟ್ಟ ಹಣಕ್ಕೆ ಸೂಕ್ತ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಪಡೆಯುವುದಾಗಿರುತ್ತದೆ ಎಂದು ತಿಳಿಸಿದರು.
ಗ್ರಾಹಕರು ಸುರಕ್ಷತೆ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆಯ ಹಕ್ಕು, ಕುಂದುಕೊರತೆಗಳನ್ನು ಪರಿಶೀಲಿಸುವುದು, ವಸ್ತುಗಳ ಬಗ್ಗೆ ಆಲಿಸುವುದು, ಗ್ರಾಹಕ ಶಿಕ್ಷಣದ ಬಗ್ಗೆ ಅರಿತುಕೊಳ್ಳುವುದಾಗಿದೆ ಎಂದರು.
ಈ ಸಂದರ್ಭ ವಿದ್ಯಾರ್ಥಿಗಳಿಗೆ ಅಳತೆ, ತೂಕದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಎನ್. ದಿವಾಕರ, ತೂಕ, ಅಳತೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಲಿಂಗರಾಜು ಡಿ.ಆರ್., ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಕುಮಾರ್, ಇತರರು ಇದ್ದರು.

error: Content is protected !!