ಮಡಿಕೇರಿಯಲ್ಲಿ ಎಸ್‍ಡಿಪಿಐ ಸಭೆ : ಶೀಘ್ರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಆಗ್ರಹ : ಕಾನೂನು ಹೋರಾಟದ ಎಚ್ಚರಿಕೆ

January 21, 2021

ಮಡಿಕೇರಿ ಜ.21 : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿಯ ಸಭೆ ಮಡಿಕೇರಿಯಲ್ಲಿ ನಡೆಯಿತು. ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ವಿಳಂಬವಾಗುತ್ತಿರುವ ಬಗ್ಗೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಯಿತು.
ರಾಜ್ಯದ ಹಲವು ಕಡೆ ಕಾಪೆರ್Çರೇಷನ್, ಮುನ್ಸಿಪಾಲಿಟಿ ಮತ್ತು ಪಂಚಾಯಿತಿಗಳ ಚುನಾವಣೆಗಳು ನಡೆಯಬೇಕಿದ್ದು, ಸರ್ಕಾರ ಕ್ಷುಲ್ಲಕ ನೆಪದಲ್ಲಿ ಇದನ್ನು ಮುಂದೂಡುತ್ತಿದೆ. ಕೆಲವು ಶಾಸಕರ ಹಾಗೂ ಸ್ಥಳೀಯ ರಾಜಕಾರಣಿಗಳ ಲಾಭಕೋಸ್ಕರ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು. ಈ ಧೋರಣೆಯನ್ನು ಪಕ್ಷ ಖಂಡಿಸುವುದಲ್ಲದೆ ಕಾನೂನು ಹೋರಾಟ ನಡೆಸುವುದಾಗಿ ಪ್ರಮುಖರು ತಿಳಿಸಿದರು.
ಜಾನುವಾರು ಸಂರಕ್ಷಣೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ಸಂವಿಧಾನ ಬಾಹಿರವಾಗಿ ಸುಗ್ರೀವಾಜ್ಞೆ ತಂದಿರುವುದು ಸರಿಯಲ್ಲ. ಈ ಕ್ರಮವನ್ನು ಸುಪ್ರೀಂಕೋರ್ಟ್‍ನ ಕೆಲವು ನಿವೃತ್ತ ನ್ಯಾಯಾಧೀಶರು ಹಾಗೂ ಕಾನೂನು ಪಂಡಿತರು ಬಹಿರಂಗವಾಗಿ ಟೀಕಿಸಿದ್ದಾರೆ. ಇದರಿಂದ ರೈತರು ಆರ್ಥಿಕವಾಗಿ ತುಂಬಾ ನಷ್ಟಕ್ಕೆ ಒಳಗಾಗಲಿದ್ದಾರೆ ಹಾಗೂ ಬಡವರಿಗೆ ಅಗ್ಗದ ಬೆಲೆಯಲ್ಲಿ ಸಿಗುವ ಪೌಷ್ಠಿಕ ಆಹಾರವನ್ನು ಕಸಿದಂತಾಗುತ್ತದೆ. ಮಾಂಸ ಮತ್ತು ಚರ್ಮದ ವ್ಯಾಪಾರಗಳನ್ನು ಮೆಚ್ಚಿಕೊಂಡಿರುವ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗುವ ಅಪಾಯ ಇದೆ ಎನ್ನುವ ಆರೋಪ ಕೇಳಿ ಬಂತು. ರಾಜ್ಯ ಸರ್ಕಾರ ತಕ್ಷಣ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಬೇಕೆಂದು ಪ್ರಮುಖರು ಒತ್ತಾಯಿಸಿದರು.
ಗೋಸಂರಕ್ಷಣೆಯ ಹೆಸರಿನಲ್ಲಿ ನೀಡುತ್ತಿರುವ ಉಚಿತ ಭೂಮಿ, ಹಣಕಾಸು ನಿಧಿ ಮತ್ತಿತರ ಸೌಲಭ್ಯಗಳನ್ನು ಸರ್ಕಾರ ಕೇವಲ ಮಠ ಮತ್ತು ಆರ್.ಎಸ್.ಎಸ್ ಬೆಂಬಲಿಗ ಸಂಸ್ಥೆಗಳಿಗೆ ನೀಡುತ್ತಿದ್ದು, ರೈತ ಸಂಘ, ಮಹಿಳಾ ಸಂಘ, ಮುಸ್ಲಿಮರ ಮಸೀದಿ, ಕ್ರೈಸ್ತರ ಚರ್ಚ್ ಹಾಗೂ ಮತ್ತಿತ್ತರ ಸೇವಾ ಸಂಸ್ಥೆಗಳಿಗೂ ಸಮಾನವಾಗಿ ನೀಡಬೇಕೆಂದು ಆಗ್ರಹಿಸಿದ ಸಭೆ ತಪ್ಪಿದಲ್ಲಿ ಪಕ್ಷದ ವತಿಯಿಂದ ಹೋರಾಟವನ್ನು ರೂಪಿಸಲು ನಿರ್ಧಾರ ಕೈಗೊಂಡಿತು.
ಕಾರವಾರದಿಂದ ಚಾಮರಾಜನಗರದವರೆಗೆ ವಿಶಾಲ ಪಶ್ಚಿಮಘಟ್ಟ ಪ್ರದೇಶದ ಕರಾವಳಿ ಮತ್ತು ಮಲೆನಾಡು ವಲಯಗಳಲ್ಲಿ ಸಂಪಧ್ಬಂರಿತ ಭೂಪ್ರದೇಶಗಳಿವೆ. ಈ ಭೂಪ್ರದೇಶವನ್ನು ಶ್ರೀಮಂತ ಭೂಮಾಲೀಕರು, ಕಾಪೆರ್Çರೇಟ್ ಕಂಪನಿಗಳು, ಮರಳು ಮಾಫಿಯಾ, ಗಣಿ ಮಾಫಿಯಾ, ಎಸ್ಟೇಟ್ ಮಾಫಿಯಾಗಳು ಮತ್ತು ರಾಜಕಾರಣಿಗಳು ಲಕ್ಷಾಂತರ ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಪ್ರಮುಖರು ಆರೋಪಿಸಿದರು. ರೈತರಿಗೆ, ಆದಿವಾಸಿಗಳಿಗೆ, ದಶಕಗಳಿಂದ ಉಳುಮೆ ಮಾರುತ್ತಿರುವರಿಗೆ ಬಡವರಿಗೆ ಹಕ್ಕುಪತ್ರ ನೀಡದೆ ಅರಣ್ಯ ಇಲಾಖೆ ಒಕ್ಕಲೆಬ್ಬಿಸುತ್ತಿದೆ. ಈ ರೀತಿಯ ತಾರತಮ್ಯ ನೀತಿಗಳನ್ನು ನಿಲ್ಲಿಸಿ, ಬಡವರಿಗೆ ಕನಿಷ್ಠ 5 ಎಕರೆ ಭೂ ಹಂಚಿಕೆ ಮಾಡಬೇಕು ಹಾಗೂ ವಸತಿಹೀನರಿಗೆ ವಸತಿಗಾಗಿ ಭೂಮಿ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ಐದು ವರ್ಷಗಳಿಂದ ಭೂಮಿ ಮತ್ತು ವಸತಿ ಹಕ್ಕುಗಳ ಹೋರಾಟಗಳನ್ನು ಎಸ್.ಡಿ.ಪಿ.ಐ ಬೆಂಬಲಿಸುತ್ತಿದೆ ಎಂದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಅಫ್ಸರ್ ಕೊಡ್ಲಿಪೇಟೆ, ಮುಜಾಹಿದ್ ಪಾಷ, ಉಪಾಧ್ಯಕ್ಷ ಅಡ್ವೋಕೇಟ್ ಅಬ್ದುಲ್ ಮಜೀದ್ ಖಾನ್, ಕಾರ್ಯದರ್ಶಿಗಳಾದ ಆಶ್ರಫ್ ಮಾಚಾರ್ ಹಾಗೂ ಅಬ್ರಾರ್ ಚಾಮರಾಜನಗರ, ಕಾರ್ಯದರ್ಶಿ ಮಂಡಳಿ ಸದಸ್ಯರು ಅಕ್ರಂ ಹಸನ್, ಅಬ್ದುಲ್ ರಹೀಂ ಪಟೇಲ್ ಮತ್ತು ಜಲೀಲ್ ಕೃಷ್ಣಾಪುರರವರು ಉಪಸ್ಥಿತರಿದ್ದರು.

error: Content is protected !!