ಕಾಫಿಗೆ ಬೆಂಬಲ ಬೆಲೆ ಘೋಷಿಸಿ : ಕೊಡಗು ರೈತಸಂಘ, ಹಸಿರು ಸೇನೆ ಒತ್ತಾಯ

January 22, 2021

ಮಡಿಕೇರಿ ಜ.22 : ಕೇರಳ ಸರ್ಕಾರ ತನ್ನ ಬಜೆಟ್‍ನಲ್ಲಿ ಕಾಫಿಗೆ ಬೆಂಬಲ ಬೆಲೆ ಘೋಷಿಸಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಬೆಂಬಲ ಬೆಲೆ ಘೋಷಿಸಬೇಕೆಂಬ ಒತ್ತಾಯ ಕೇಳಿ ಬರತೊಡಗಿದೆ.
ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ರೈತ ಸಂಘ, ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ರೈತರ ಸಭೆಯಲ್ಲೂ ಈ ಒತ್ತಾಯ ಕೇಳಿ ಬಂದಿದ್ದು,
ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇರಳ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಂತೆ ಕಾಫಿಗೆ ಉತ್ತಮ ಬೆಲೆಯನ್ನು ರಾಜ್ಯ ಸರ್ಕಾರ ಘೋಷಿಸಬೇಕು ಇಲ್ಲದಿದ್ದಲ್ಲಿ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಕೇರಳದಲ್ಲಿ ಬೆಂಬಲ ಬೆಲೆಯಾಗಿ ಕಾಫಿಗೆ ಪ್ರತಿ ಕೆ.ಜಿ.ಗೆ ರೂ. 90 ನಿಗದಿಪಡಿಸಲಾಗಿದೆ. ಆದರೆ ಅತೀ ಹೆಚ್ಚು ಕಾಫಿ ಬೆಳೆಯುವ ಕೊಡಗಿನ ಬೆಳೆಗಾರರಿಗೆ ಕರ್ನಾಟಕ ಸರ್ಕಾರದಿಂದ ಯಾವುದೇ ಪ್ರಯೋಜನ ವಾಗುತ್ತಿಲ್ಲ, ರಾಜ್ಯದಲ್ಲಿ ಬೆಂಬಲ ಬೆಲೆ ಘೋಷಣೆಯಾಗದಿದ್ದಲ್ಲಿ ಜಿಲಾದ್ಯಂತ ಬೃಹತ್ ಪ್ರತಿಭಟನೆ ನಡೆಸುವಂತೆ ತೀರ್ಮಾನಿಸಿದ ಸಭೆ ಈ ಸಂಬಂಧ ಶಾಸಕರು, ಸಂಸದರು ಸರ್ಕಾರದ ಗಮನಕ್ಕೆ ತರಬೇಕು ಎಂಬ ಒತ್ತಾಯವೂ ಕೇಳಿ ಬಂದಿತು.
ಹುಲಿ ದಾಳಿ, ಜಾನುವಾರು ಕಳೆದುಕೊಂಡವರಿಗೆ ಪರಿಹಾರ ವಿತರಣೆ ಮತ್ತು ಕಾಫಿ ಕೊಯ್ಲಿಗೆ ಬರುವ ಕಾರ್ಮಿಕರ ವಾಹನಗಳನ್ನು ತಡೆದು ಅಡ್ಡಿಪಡಿಸುತ್ತಿರುವ ಪೆÇಲೀಸರ ಕ್ರಮಕ್ಕೂ ಆಕ್ಷೇಪ ವ್ಯಕ್ತವಾಯಿತು.
ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಚಿ ಸವಿತಾ ಭೀಮಯ್ಯ, ಮುಖಂಡ ಪುಚ್ಚಿಮಾಡ ರಾಯ್ ಮತ್ತಿತರÀ ರೈತ ಮುಖಂಡರು ಸಭೆಯಲ್ಲಿ ಹಾಜರಿದ್ದರು.