ಅಯೋಧ್ಯಾ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಚೆಟ್ಟಳ್ಳಿಯಲ್ಲಿ ನಿಧಿ ಸಂಗ್ರಹ ಅಭಿಯಾನ

January 22, 2021

ಮಡಿಕೇರಿ ಜ. 22 : ಅಯೋಧ್ಯಾ ಶ್ರೀರಾಮಮಂದಿರ ನಿರ್ಮಾಣ ಕಾರ್ಯಕ್ಕೆ ನಿಧಿ ಸಂಗ್ರಹ ಅಭಿಯಾನದ ಪ್ರಯುಕ್ತ ಚೆಟ್ಟಳ್ಳಿಯ ಶ್ರೀವಿರಾಂಜನೆಯ ಯುವಕ ಸಂಘ ಜನಪರ ಹೋರಾಟ ಸಮಿತಿ ಹಾಗೂ ಕೂಡ್ಲೂರು ಚೆಟ್ಟಳ್ಳಿ ಶ್ರೀವಿನಾಯಕ ದೇವಾಲಯ ಸಮಿತಿಯ ವತಿಯಿಂದ ಶ್ರೀರಾಮನಿಗೆ ವಿಶೇಷ ಪೂಜೆ ಹಾಗೂ ಸಮರ್ಪಣಾ ಕಾರ್ಯಕ್ರಮ ನೆರವೇರಿತು.
ಚೆಟ್ಟಳ್ಳಿಯ ಶ್ರೀನರೇಂದ್ರ ಮೋದಿ ರೈತ ಸಹಕಾರ ಭವನದಲ್ಲಿ ಶ್ರೀರಾಮನಿಗೆ ವಿಶೇಷಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ವಿಶ್ವಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಡಿ.ನರಸಿಂಹ ಮಾತನಾಡಿ, ಶ್ರೀರಾಮನ ಮಂದಿರ ಅಯೋಧ್ಯದಲ್ಲಿ ನಿರ್ಮಾಣವಾಗಬೇಕೆಂಬ ಕನಸು ಈಗ ನನಸಾಗಿದೆ. ಅಂಗವಿಕಲರಿಂದ ಹಿಡಿದು ಯುವಕರು, ಹಿರಿಯರೆಲ್ಲ ಕೈಜೋಡಿಸಿ ರಾಮಮಂದಿರ ನಿರ್ಮಾಣ ವಾಗಲೇ ಬೇಕೆಂದು ಕೈಜೋಡಿಸಿದ್ದಾರೆ. ಎಲ್ಲಾ ಹಿಂದುಗಳ ಶ್ರಮದ ಬೆವರಿನಿಂದಲೇ ರಾಮಮಂದಿರ ನಿರ್ಮಾಣ ಮಾಡೋಣವೆಂಬುದು ಹಿರಿಯ ಆಶ್ರಯವಾಗಿದ್ದು, ಎಲ್ಲೆಡೆಯಿಂದ ಆಭೂತಪೂರ್ವ ಸಹಕಾರ ನೀಡಲಾಗುತ್ತಿದೆ ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಪ್ರಮುಖರಾದ ಕುಟ್ಟಂಡ ಪ್ರಿನ್ಸ್ ಗಣಪತಿ ಮಾತನಾಡಿ, ಇಡೀ ದೇಶದಲ್ಲಿ ಅಯೋಧ್ಯರಾಮಮಂದಿರ ನಿರ್ಮಾಣ ನಡೆಯುತಿದ್ದು, ಇಡೀ ಭಕ್ತರ ಸಮೂಹವೇ ಕೈಜೋಡಿಸಿದ್ದರೂ ಶ್ರೀರಾಮನೆಲೆಯಲ್ಲಿ ಮಂದಿರ ನಿರ್ಮಾಣಕ್ಕೆ ಹಲವು ವರ್ಷಗಳ ಕಾನೂನಾತ್ಮಕ್ಕ ಹೋರಾಟವೇ ನಡೆದಿರುವುದು ಬೇಸರದ ಸಂಗತಿ ಎಂದರು.

ರಾಮನ ಆದರ್ಶ ಸದ್ಗುಣಗಳನ್ನು ನಾವೆಲ್ಲ ಮೈಗೂಡಿಸಕೊಳ್ಳಬೇಕು. ಆರು ಲಕ್ಷ ಗ್ರಾಮಗಳಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸಂಘಟನೆಯಲ್ಲಿ ಬಲಿ ಇದೆ ಎಂಬುದು ಶ್ರೀರಾಮಮಂದಿರ ನಿರ್ಮಾಣಕಾರ್ಯದಲ್ಲಿ ತಿಳಿಯಲಿದೆಂದರು.

ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಮಾತನಾಡಿ, ಹಲವು ವರ್ಷಗಳ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯಿಂದ ಬೆಳೆದು ಬಂದವರು ಅಯೋಧ್ಯನಿರ್ಮಾಣದ ಕಾರ್ಯಕ್ಕೆ ಚೆಟ್ಟಳ್ಳಿಯಿಂದ ಇಟ್ಟಿಗೆ ದೇಣಿಗೆ ಹಾಗೂ ಕರಸೇವೆಗೆ ತೊಡಗಿಸಿಕೊಂಡು ಕಳೆದುಕೊಂಡವರು ಚೆಟ್ಟಳ್ಳಿಯಲ್ಲಿದ್ದಾರೆ. ಚೆಟ್ಟಳ್ಳಿಯ ಶ್ರೀನರೆಂದ್ರ ಮೋದಿ ರೈತ ಸಹಕಾರ ಸಂಘದ ನೆಲೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನಿಧಿಸಮರ್ಪಣಾ ಅಭಿಯಾನ ನಡೆದಿರುವುದು ಹೆಮ್ಮೆ ಎನಿಸಿದೆಂದರು.

ಹಿಂದೂಗಳೇ ಹಿಂದುಗಳನ್ನು ತುಳಿಯುವ ಕೆಲಸವಾಗಬಾರದು. ನಾವೆಲ್ಲ ಭಾರತ ಮಾತೆಯ ಮಕ್ಕಳೆಂಬ ಮೂಲಕ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಕೈಜೋಡಿಸೋಣವೆಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಪ್ರಮುಖರಾದ ಭರತ್ ಮಾಚಯ್ಯ, ವಿಶ್ವ ಹಿಂದೂ ಪರಿಷತ್‍ನ ತಾಲ್ಲೂಕು ಅಧ್ಯಕ್ಷ ಸಂತೋಷ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಪ್ರಮುಖರಾದ ಕೆ.ಕೆ ದಿನೇಶ್ , ಕುಶಾಲನಗರ ತಾಲೂಕು ವ್ಯವಸ್ತಾ ಪ್ರಮುಖ್ ಜನಾರ್ಧನ್, ಕೂಡ್ಲೂರು ಚೆಟ್ಟಳ್ಳಿ ಶ್ರೀವಿನಾಯಕ ದೇವಾಲಯ ಸಮಿತಿಯ ಅಧ್ಯಕ್ಷ ಎನ್ . ಎಸ್.ರವಿ ಇದ್ದರು. ಚೆಟ್ಟಳ್ಳಿ ವೀರಾಂಜನೇಯ ಯುವಕ ಸಂಘದ ಅಧ್ಯಕ್ಷ ಕಂಠಿಕಾರ್ಯಪ್ಪ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಚೆಟ್ಟಳ್ಳಿ ಸಹಕಾರ ಸಂಘದ ನಿರ್ದೇಶಕರು ಹಾಜರಿದ್ದರು.

ಇದೇ ಸಂದರ್ಭ ಸಂಗ್ರಹಿಸಿದ ರೂ.30ಸಾವಿರ ದೇಣಿಗೆಯನ್ನು ಸಂಘಟನೆ ಪ್ರಮುಖರಿಗೆ ಹಸ್ತಾಂತ ರಿಸಿದರು.

error: Content is protected !!