ಪ್ರತಿ ತಿಂಗಳ ಒಂದು ಭಾನುವಾರ ಭಾಗಮಂಡಲದಲ್ಲಿ ಜನತಾ ಕ್ಲೀನಿಕ್

January 22, 2021

ಮಡಿಕೇರಿ ಜ. 22 : ಭಾಗಮಂಡಲ ತಲಕಾವೇರಿ ತೀರಾ ಗ್ರಾಮೀಣ ಪ್ರದೇಶ. MBBS ವೈದ್ಯರನ್ನು ನೋಡಬೇಕೆಂದರೆ ಕನಿಷ್ಟ ಪಕ್ಷ ಚೇರಂಬಾಣೆ ಅಥವಾ ನಾಪೋಕ್ಲುವಿಗೆ ಹೋಗಬೇಕು. ಪ್ರತಿ ತಿಂಗಳಿನ ಒಂದು ಭಾನುವಾರ ನಾನು ಭಾಗಮಂಡಲದಲ್ಲಿ ಸಿಗುತ್ತೇನೆ ಎಂಬ ವಿಷಯವನ್ನು ಈ ಹಿಂದೆ ಹೇಳಿದ್ದೆ‌. ಕಾರಣಾಂತರಗಳಿಂದ ಈ ಕಾರ್ಯಕ್ರಮವನ್ನು ಮುಂದೂಡುತ್ತಾ ಬಂದೆ. 2021ರಿಂದ ಈ ಯೋಜನೆಯನ್ನು ಶುಭಾರಂಭ ಮಾಡುತ್ತಿದ್ದೇವೆ. ಇದೇ ಭಾನುವಾರ ಜ. 24ರಂದು ಭಾಗಮಂಡಲದ ಸಂಜೂ ಕಾಂಪ್ಲೆಕ್ಸಿನಲ್ಲಿ ಮುಂಜಾನೆ 10 ಗಂಟೆಯ ನಂತರ ಜನತಾ ಕ್ಲೀನಿಕ್ ತೆರೆದಿರುತ್ತದೆ.

ಮುಂದಿನ ತಿಂಗಳುಗಳಲ್ಲಿ ಬರುವಾಗ ನಾನು ಒಬ್ಬನೇ ಬರುವುದಿಲ್ಲ. ವಿವಿಧ ತಜ್ಞ ವೈದ್ಯರನ್ನು ಒಬ್ಬೊಬ್ಬರಾಗಿ ಕರೆದುಕೊಂಡು ಬರುವ ಆಲೋಚನೆಯಿದೆ.
ಶೀತ ಜ್ವರದಿಂದ ಶುಗರ್ ಬಿಪಿಯ ತನಕ , ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಪ್ರತಿ ತಿಂಗಳ ಜನತಾ ಕ್ಲೀನಿಕ್ಕಿಗೆ ಬರಬಹುದು. ಅತೀ ಬಡವರಿಗೆ ಉಚಿತ ಔಷಧಿಗಳನ್ನು ಒದಗಿಸಲು ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ ಮಿತ್ರರೊಬ್ಬರು ಮುಂದೆ ಬಂದಿದ್ದಾರೆ.

ಭಾಗಮಂಡಲ ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಜನತಾ ಕ್ಲಿನಿಕ್ ವಿಷಯವಾಗಿ ಯಾವದೇ ಪತ್ರಿಕಾ ಪ್ರಕಟನೆ , ಉದ್ಘಾಟನಾ ಸಮಾರಂಭ , ಭಾಷಣ ಮತ್ತು ಊಟದ ವ್ಯವಸ್ಥೆ ಇರುವುದಿಲ್ಲ. ಆರೋಗ್ಯದ ವಿಷಯ ಬಿಟ್ಟು ಬೇರೆ ವಿಚಾರಗಳ ಚರ್ಚೆ ಜನತಾ ಕ್ಲೀನಿಕ್ಕಿನಲ್ಲಿ ನಿಷಿದ್ಧ.
ನನ್ನ ಮಧ್ಯಾಹ್ನದ ಊಟವನ್ನು ದೇವಸ್ಥಾನದಲ್ಲಿ ಮಾಡುತ್ತಿರುವ ಕಾರಣ, “ನಿಮ್ಮ ಫ್ಯಾನು ಸಾರ್” “ನಿಮ್ಮ ಕಥೆಗಳನ್ನು ಓದಿ ಹೀಗೆ ಸುಮ್ಮನೆ ಮಾತನಾಡಿಸಲು ಬಂದೆ” ಎಂದು ಮಾತನಾಡಿಸುವ ಮಿತ್ರರಿಗೆ ನಾನು ಭಗಂಡೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನದ ಊಟದ ವೇಳೆಯಲ್ಲಿ ಸಿಗುತ್ತೇನೆ. ಜನತಾ ಕ್ಲೀನಿಕ್ಕಿಗೆ ಸ್ಥಳದ ವ್ಯವಸ್ಥೆ ಮಾಡುತ್ತಿರುವ ಸಂಜು ಪಟ್ಟಮಾಡ ಮತ್ತು ಸಹಕರಿಸಲು ಸನ್ನದ್ಧರಾಗಿರುವ ನನ್ನ ಸ್ವಯಂಸೇವಕ ಮಿತ್ರರಿಗೆ ಮುಂಗಡವಾಗಿ ಧನ್ಯವಾದಗಳು.
ವಿ. ಸೂ : ಜನತಾ ಕ್ಲೀನಿಕ್ಕಿಗೆ ನೀವು ಬರಿಗೈಯಲ್ಲಿ ಬರಬಹುದು.

ನಿಮ್ಮ
Maj Kushvanth Kolibailu

error: Content is protected !!