ಫೆ.3 ರಂದು ಮಡಿಕೇರಿಯಲ್ಲಿ ರಾಮಮಂದಿರದ ಕುರಿತು ಕವಿಗೋಷ್ಠಿ

22/01/2021

ಮಡಿಕೇರಿ ಜ.22 : ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ನಿರ್ದೇಶನದಂತೆ ಪರಿಷದ್‍ನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಫೆ.3ರಂದು ‘ಅಯೋಧ್ಯೆಯಲ್ಲಿ ರಾಮ ಮಂದಿರ, ಹೃದಯದಲ್ಲಿ ಶ್ರೀರಾಮ ಚಂದಿರ’ ವಿಷಯದ ಕುರಿತು ರಾಜ್ಯ ಮಟ್ಟದ ಸ್ಪರ್ಧಾತ್ಮಕ ಕವಿಗೋಷ್ಠಿಯನ್ನು ನಗರದ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಮಿತಿಯ ಜಿಲ್ಲಾ ಅಧ್ಯಕ್ಷ ಕಿಗ್ಗಾಲು ಗಿರೀಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಹಂತಗಳಲ್ಲಿ ಕವಿಗೋಷ್ಠಿ ನಡೆಯಲಿದ್ದು, ಮೊದಲ ಸುತ್ತಿನಲ್ಲಿ ಜಿಲ್ಲಾ ಮಟ್ಟದ ಕವಿತಾ ರಚನೆ ಹಾಗೂ ವಾಚನ ಸ್ಪರ್ಧೆ, ಎರಡನೆ ಸುತ್ತು ಮಂಗಳೂರು ವಿಭಾಗ ಮಟ್ಟದಲ್ಲಿ ಹಾಗೂ ಅಂತಿಮ ಸುತ್ತು ಕರ್ನಾಟಕ ರಾಜ್ಯ ಮಟ್ಟದಲ್ಲಿ ನಡೆಯಲಿದೆ ಎಂದರು.
ಅಂತಿಮ ಸುತ್ತಿನಲ್ಲಿ ಆಯ್ಕೆಯಾದ 50 ಕವನಗಳನ್ನು ಸಂಕಲನದ ರೂಪದಲ್ಲಿ ಪ್ರಕಟಿಸಲಿದ್ದು, ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ 7 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು ಎಂದರು.
ಕವನದ ಮಿತಿ 20 ಸಾಲುಗಳು, ಸಂಘರ್ಷಕ್ಕೆ ಎಡೆ ಮಾಡುವಂತಹ ಪದಗಳ ಬಳಕೆ ಮಾಡಬಾರದು, ಕವನದಲ್ಲಿ ಸರಳತೆ ಇರಬೇಕು. ಕವನ ಕಳುಹಿಸುವ ಸಂದರ್ಭ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿರಬೇಕು ಎಂದರು.
ಭಾಗವಹಿಸಲು ಇಚ್ಚಿಸುವವರು ತಮ್ಮ ಕವನಗಳನ್ನು ಜ.31ರ ಒಳಗಾಗಿ 9972281019 ಅಥವಾ 9481431510 ಸಂಖ್ಯೆಗೆ ವಾಟ್ಸಾಪ್ ಮೂಲಕ ಅಥವಾ ಸಂಘದ ಖಜಾಂಚಿ ಆಶಾ ಧರ್ಮಪಾಲ್, ಅಂಕಿತ ಗಿಫ್ಟ್ ಸೆಂಟರ್, ಪ್ರಧಾನ ಅಂಚೆ ಕಚೇರಿ ಹತ್ತಿರ, ಮಡಿಕೇರಿ- 571201 ಕೊಡಗು. ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬಹುದು. ಆಯ್ದ ಕವನಗಳನ್ನು ಗೋಷ್ಠಿಯಲ್ಲಿ ವಾಚಿಸುವ ಅವಕಾಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ : 83102 87729 ನ್ನು ಸಂಪರ್ಕಿಸಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿಗಳಾದ ಬಬ್ಬೀರ ಸರಸ್ವತಿ, ಕೋರನ ಸುನಿಲ್, ಖಜಾಂಚಿ ಕಡ್ಲೆರ ಆಶಾ ಧರ್ಮಪಾಲ್, ಜಿಲ್ಲಾ ಸಮಿತಿ ಸದಸ್ಯೆ ಕಸ್ತೂರಿ ಗೋವಿಂದಮ್ಮಯ್ಯ, ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಬಾರಿಯಂಡ ಜೋಯಪ್ಪ ಉಪಸ್ಥಿತರಿದ್ದರು.