ಮಡಿಕೇರಿ ಆಕಾಶವಾಣಿ ಸಹಪ್ರಸಾರ ಕೇಂದ್ರವಾಗಬಾರದು : ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮನವಿ

January 22, 2021

ಮಡಿಕೇರಿ ಜ.22 : ಗುಡ್ಡಗಾಡು ಪ್ರದೇಶ ಕೊಡಗಿನ ಜನರ ಹಿತದೃಷ್ಟಿಯಿಂದ ಮಡಿಕೇರಿ ಆಕಾಶವಾಣಿ ಕೇಂದ್ರವನ್ನು ಬೆಂಗಳೂರು ಕೇಂದ್ರದ ಸಹಪ್ರಸಾರ (ರಿಲೇ ಸೆಂಟರ್) ಕೇಂದ್ರವನ್ನಾಗಿ ಪರಿವರ್ತಿಸದೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕೆಂದು ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮನವಿ ಮಾಡಿದೆ.
ಮಡಿಕೇರಿ ಆಕಾಶವಾಣಿ ನಿಲಯ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಸ್ಥೆಯ ಪ್ರಮುಖರು, ಇತ್ತೀಚಿನ ಕೆಲವು ವರದಿಗಳ ಪ್ರಕಾರ ಮಡಿಕೇರಿ ಆಕಾಶವಾಣಿ ಕೇಂದ್ರವನ್ನು ಬೆಂಗಳೂರು ಕೇಂದ್ರದ ಸಹಪ್ರಸಾರ ಕೇಂದ್ರವನ್ನಾಗಿ ಮಾರ್ಪಡಿಸುವ ಬಗ್ಗೆ ಮಾಹಿತಿ ದೊರೆತ್ತಿದೆ. ಒಂದು ವೇಳೆ ಈ ಪ್ರಸ್ತಾಪ ಅನುಷ್ಠಾನಗೊಂಡರೆ ಕೊಡಗಿನ ಜನರಿಗೆ ಅನ್ಯಾಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿ ಆಕಾಶವಾಣಿ ಕೇಂದ್ರ ಕೊಡಗಿನ ಸರ್ವಜನರ ಒಡನಾಡಿಯಾಗಿದೆ. ಸೈನ್ಯ, ಕ್ರೀಡೆ ಮತ್ತು ಕೃಷಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಪುಟ್ಟ ಜಿಲ್ಲೆ ಗುಡ್ಡಗಾಡು ಪ್ರದೇಶಗಳಿಂದ ಕೂಡಿದೆ. ಜಿಲ್ಲೆಯಲ್ಲಿನ ಸಮಗ್ರ ಮಾಹಿತಿಯನ್ನು ಸುಲಭವಾಗಿ ಆಕಾಶವಾಣಿ ಮೂಲಕವೇ ಇಲ್ಲಿನ ಜನರು ಪಡೆದುಕೊಳ್ಳುತ್ತಾರೆ.
ಜಿಲ್ಲೆಯ ಮೂಲೆ ಮೂಲೆಗೂ ಸುದ್ದಿ ತಲುಪಲು ರೇಡಿಯೋ ಒಂದೇ ಸಂಪರ್ಕ ಸಾಧನವಾಗಿದೆ. ಆಕಾಶವಾಣಿಯ ನಿರ್ದೇಶನಾಲಯದ ಅನುಮತಿ ಮೇರೆಗೆ ಮಡಿಕೇರಿ ಆಕಾಶವಾಣಿ ನೀಡುತ್ತಿರುವ ಸ್ಥಳೀಯ ನಿಧನ ಸುದ್ದಿ, ಈ ವಲಯದಲ್ಲಿ ರೇಡಿಯೋ ಮಾಧ್ಯಮಕ್ಕೆ ಅಪಾರ ಜನಪ್ರಿಯತೆ ತಂದುಕೊಟ್ಟಿದೆ.
ಜಿಲ್ಲೆಯಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ಸಮಾಜ ಸೇವೆ, ಕೃಷಿ ಹೀಗೆ ವಿವಿಧ ರಂಗಗಳಲ್ಲಿ ಪರಿಣಿತರಾದ ಹಲವು ಸಾಧಕರಿದ್ದಾರೆ. ಇವರ ಹಾಗೂ ಯುವ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಸ್ಫೂರ್ತಿ ತುಂಬಬಲ್ಲ ಈ ರೇಡಿಯೋ ಮಾಧ್ಯಮದ ಅಸ್ತಿತ್ವ ಕೊಡಗು ಜಿಲ್ಲೆಗೆ ಅವಶ್ಯ ಮತ್ತು ಅನಿವಾರ್ಯವಾಗಿದೆ. ಕೊಡಗಿನ ಭಾವನಾತ್ಮಕ ಸಂಕೇತವಾಗಿರುವ ಸುದ್ದಿ ಸಮಾಚಾರ ಹಾಗೂ ಸಾವು ಸುದ್ದಿ ಪ್ರಸಾರವಾಗದೇ ಇದ್ದರೆÀ ಜನರಿಗೆ ತೊಂದರೆಯಾಗಲಿದೆ ಎಂದು ಗಮನ ಸೆಳೆದಿರುವ ಪ್ರಮುಖರು, ಮಡಿಕೇರಿ ಆಕಾಶವಾಣಿಯಲ್ಲಿ ಸ್ಥಳೀಯ ಕಾರ್ಯಕ್ರಮಗಳನ್ನು ಮೊಟಕುಗೊಳಿಸದೆ ಮೊದಲಿನಂತೆಯೇ ಪ್ರಸಾರ ಮಾಡಬೇಕು ಮತ್ತು ಆಕಾಶವಾಣಿಯ ಪ್ರಧಾನ ಕಚೇರಿಯೊಂದಿಗೆ ಪತ್ರವ್ಯವಹಾರ ನಡೆಸಿ ಗೊಂದಲವನ್ನು ನಿವಾರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳು, ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಮನವಿಯನ್ನು ಕಳುಹಿಸಿಕೊಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಬಿ.ದೇವಯ್ಯ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ, ಖಜಾಂಚಿ ಮೋಂತಿ ಗಣೇಶ್, ನಿರ್ದೇಶಕ ಅರುಣ್ ಕುಮಾರ್ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.

error: Content is protected !!