ಹೊದ್ದೂರು ಗ್ರಾ.ಪಂ ನಲ್ಲಿ ಡಿಜಿಟಲ್ ಗ್ರಂಥಾಲಯ ಕಾರ್ಯಾರಂಭ

January 22, 2021

ಮಡಿಕೇರಿ ಜ. 22 : ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಉಪಯೋಗವಾಗಲು ತಾಲ್ಲೂಕಿನಲ್ಲೇ ಮೊದಲ ಹೈಟೆಕ್ ಮಾದರಿ ಡಿಜಿಟಲ್ ಗ್ರಂಥಾಲಯ ಓದುವ ಬೆಳಕು ಯೋಜನೆಯ ಮೂಲಕ ಕಾರ್ಯಾರಂಭ ವಾಗಿದೆ.
ರೂ. 8ಲಕ್ಷ ವೆಚ್ಚದಲ್ಲಿ ಪಂಚಾಯಿತಿ ಕಟ್ಟಡದಲ್ಲಿ ಅತ್ಯಾಧುನಿಕವಾಗಿ ಸುಸಜ್ಜಿತವಾದ ಡಿಜಿಟಲ್ ಲೈಬ್ರರಿಗೆ ರಾಜ್ಯ ಪಂಚಾಯತ್‍ರಾಜ್ ಇಲಾಖೆ ಆಯುಕ್ತರಾದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಚಾಲನೆ ನೀಡಿದರು.
ಮಾಧ್ಯಮದೊಂದಿಗೆ ಮಾತನಾಡಿ ನವೆಂಬರ್ ತಿಂಗಳಿನಿಂದ ಪಂಚಾಯತ್‍ರಾಜ್ ಇಲಾಖೆ ಮೂಲಕ ಪ್ರಾರಂಭವಾಗಿರುವ ಓದುವ ಬೆಳಕು ಕಾರ್ಯಕ್ರಮಕ್ಕೆ ಎಲ್ಲಾ ಗ್ರಾಮ ಪಂಚಾಯಿತಿಯಲ್ಲೂ ಡಿಜಿಟಲ್ ಲೈಬ್ರರಿ ಪ್ರಾರಂಭಿಸಿ 6ರಿಂದ 18 ವರ್ಷದ ವಿದ್ಯಾರ್ಥಿಗಳಿಗೆ ಉಚಿತ ನೋಂದಾವಣೆ ಮಾಡಲಾಗುತ್ತದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲೂ ಗ್ರಂಥಾಲಯ ಪ್ರಾರಂಭವಾಗಲಿದ್ದು, ಗ್ರಂಥಾಲಯದ ಸೇವೆಗಳನ್ನು ಸದುಪಯೋಗ ಪಡಿಸಿಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅವರ ಪ್ರಾಮಾಣಿಕ ಸೇವೆ ಹಾಗೂ ಆಡಳಿತ ಅಧಿಕಾರಿ, ಸಿಬ್ಬಂದಿಗಳ ಮತ್ತು ಗ್ರಾಮಸ್ಥರ ಸಹಕಾರದಿಂದ ಹೈಟೆಕ್ ಮಾದರಿಯಲ್ಲಿ ಗ್ರಂಥಾಲಯವನ್ನ ಎಲ್ಲ ಸೌಲಭ್ಯಗಳೊಂದಿಗೆ ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ಚಂದ್ರಶೇಖರ್ ಮಾತನಾಡಿ, ತಾಲ್ಲೂಕಿನಲ್ಲಿಯೇ ಪ್ರಥಮ ಡಿಜಿಟಲ್ ಗ್ರಂಥಾಲಯವನ್ನು ಹೊದ್ದೂರು ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಮಾಡಲಾಗಿದ್ದು, ಇದರ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಂಚಾಯಿತಿ ಮೂಲಕ ಪಡೆದುಕೊಳ್ಳುವಂತೆ ತಿಳಿಸಿದರು.
ಪಂಚಾಯಿತಿ ಆಡಳಿತಾಧಿಕಾರಿ ಪಿ. ಪಿ ಕವಿತಾ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಗ್ರಂಥಾಲಯಕ್ಕೆ ದಾನಿಗಳು ಹೆಚ್ಚಿನ ಸಹಕಾರ ನೀಡಿರುವ ಹಿನ್ನಲೆಯಲ್ಲಿ 4 ಸಾವಿರ ಪುಸ್ತಕಗಳು ಗ್ರಂಥಾಲಯದಲ್ಲಿದ್ದು, ಪ್ರತಿಯೊಬ್ಬರು ಪುಸ್ತಕ ಓದುವಜ್ಞಾನ ಬೆಳೆಸಿಕೊಂಡು ಮುನ್ನಡೆಯಬೇಕೆಂದರು.
ಈ ಸಂದರ್ಭ ತಹಸೀಲ್ದಾರ್ ಮಹೇಶ್, ಪಂ. ಅಭಿವೃದ್ಧಿ ಅಧಿಕಾರಿ ಎ.ಎ ಅಬ್ದುಲ್ಲ, ಕಾರ್ಯದರ್ಶಿ ಚಂದ್ರಶೇಖರ್, ಸದಸ್ಯರಾದ ಎಚ್.ಎಚ್. ಹಂಸ,ಹೆಚ್. ಕೆ ಮೊಣ್ಣಪ್ಪ., ಎಂ. ವೈ ಮಾಹಿನ್, ವಿ. ಕೆ ಅಜಯ್‍ಕುಮಾರ್, ಮೊಯ್ದು, ಮಾಹಿನ್ ,ಕುಸುಮಾವತಿ ,ಲಕ್ಷ್ಮಿ, ಅನಿತಾ, ನವೀನ್, ಗ್ರಂಥ ಪಾಲಕಿ ಸಣ್ಣಮ್ಮ, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.