ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ ಅನಾಹುತ ತಪ್ಪಿಸಿ : ಕೊಡಗು ಕಾಂಗ್ರೆಸ್ ಒತ್ತಾಯ

January 22, 2021

ಮಡಿಕೇರಿ ಜ.22 : ಶಿವಮೊಗ್ಗದಲ್ಲಿ ನಡೆದ ಗಣಿಸ್ಫೋಟ ದುರಂತಕ್ಕೆ ಅಕ್ರಮ ಗಣಿಗಾರಿಕೆಯೇ ಕಾರಣವಾಗಿದ್ದು, ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ಟಿ.ಈ.ಸುರೇಶ್ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸ್ಫೋಟದಿಂದ ಆಗಿರುವ ಸಾವು, ನೋವುಗಳಿಗೆ ಜಿಲ್ಲಾ ಕಾಂಗ್ರೆಸ್ ವಿಷಾದ ವ್ಯಕ್ತಪಡಿಸುತ್ತದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಈ ದುರಂತ ಸಂಭವಿಸಿದ್ದು, ಮೃತಪಟ್ಟವರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಿಕೊಡಬೇಕು. ಹಾನಿಗೀಡಾದ ಮನೆಗಳಿಗೂ ಪರಿಹಾರ ಧನ ವಿತರಿಸಬೇಕು. ಅನಾಹುತಕ್ಕೆ ಕಾರಣವಾದ ಅಂಶಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಸಂಬಂಧಿಸಿದ ಅಧಿಕಾರಿಗಳು ಸೇರಿದಂತೆ ತಪ್ಪಿತಸ್ತರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು ಮತ್ತಿತರೆಡೆ ಕೂಡ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿರುವ ಸುರೇಶ್, ಅನಾಹುತ ಸಂಭವಿಸುವ ಮೊದಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕೆಂದು ಹೇಳಿದ್ದಾರೆ.
ಕಾನೂನು ಬದ್ಧ ಗಣಿಗಾರಿಕೆಗೆ ಮಾತ್ರ ಅವಕಾಶ ನೀಡಬೇಕು ಮತ್ತು ಗಣಿ ಸಂಸ್ಥೆಗಳು ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿವೆಯೇ, ಕಾರ್ಮಿಕರಿಗೆ ಭದ್ರತೆ ನೀಡಿವೆಯೇ, ಸಾರ್ವಜನಿಕರ ಹಿತ ಕಾಯುತ್ತಿದೆಯೇ ಎನ್ನುವುದನ್ನು ಅಧಿಕಾರಿಗಳು ಮೊದಲು ಖಾತ್ರಿ ಪಡಿಸಿಕೊಳ್ಳಬೇಕು ಹಾಗೂ ಜನವಸತಿ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.