ಶಾಸಕರು ಮೊದಲು ಸರ್ಕಾರದ ಮನೆಯನ್ನು ಸರಿಪಡಿಸಲಿ : ಕೆ.ಕೆ.ಮಂಜುನಾಥ್ ಕುಮಾರ್ ತಿರುಗೇಟು

January 22, 2021

ಮಡಿಕೇರಿ ಜ.22 : ಅಧಿಕಾರದ ಹಸಿವಿನ ಆಡಳಿತ ಪಕ್ಷದ ಶಾಸಕರುಗಳಿಂದಾಗಿ ರಾಜ್ಯ ಸರ್ಕಾರ ಮನೆಯೊಂದು ಮೂರು ಬಾಗಿಲಾಗಿದೆ. ಕಾಂಗ್ರೆಸ್ ಪ್ರತಿಭಟನೆಯನ್ನು ಟೀಕಿಸುವ ಶಾಸಕರು ಮೊದಲು ತಮ್ಮ ಸರ್ಕಾರದ ಮನೆಯೊಳಗಿನ ರಾಜಕೀಯ ದುರುದ್ದೇಶವನ್ನು ಸರಿಪಡಿಸುವತ್ತ ಗಮನ ಹರಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತಿರುಗೇಟು ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ಕೃಷಿಕ ವರ್ಗದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನು ಶಾಸಕ ಕೆ.ಜಿ.ಬೋಪಯ್ಯ ಅವರು ಟೀಕಿಸಿರುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆ ನಡೆಸಲು ಸಂವಿಧಾನ ಪ್ರತಿಯೊಬ್ಬರಿಗೂ ಅವಕಾಶವನ್ನು ಕಲ್ಪಿಸಿದೆ ಕಾಂಗ್ರೆಸ್ ಪಕ್ಷ ದೇಶ ಮತ್ತು ದೇಶದ ಬೆನ್ನೆಲುಬಾಗಿರುವ ರೈತರ ಹಿತ ಕಾಯುವ ಉದ್ದೇಶದಿಂದಲೇ ಪ್ರತಿಭಟನೆ ನಡೆಸಿದೆ. ಆದರೆ ಶಾಸಕರು ರಾಜಕೀಯ ದುರುದ್ದೇಶದ ಪ್ರತಿಭಟನೆ ಎಂದು ಟೀಕಿಸಿರುವುದು ಖಂಡನೀಯ. ಅಧಿಕಾರದ ವ್ಯಾಮೋಹದಿಂದ ರಾಜ್ಯದ ಇಡೀ ರಾಜಕೀಯ ವ್ಯವಸ್ಥೆಯನ್ನೇ ಆಪರೇಷನ್ ಕಮಲದ ಮೂಲಕ ಮೈಲಿಗೆ ಮಾಡಿದವರು ಬಿಜೆಪಿಗರೇ ಹೊರತು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ದೇಶವನ್ನು ಪ್ರಗತಿಪಥದತ್ತ ಸಾಗಿಸಿದ ಕಾಂಗ್ರೆಸ್ಸಿಗರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೇಶ ವ್ಯಾಪಿ ತೀವ್ರಗೊಳ್ಳುತ್ತಿರುವ ಪ್ರತಿಭಟನೆಯಿಂದ ಹತಾಶಗೊಂಡಿರುವ ಬಿಜೆಪಿ ಮಂದಿ ಕೃಷಿ ಕಾಯ್ದೆ ತಿದ್ದುಪಡಿಯ ಗೂಬೆಯನ್ನು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಮೇಲೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ಹಂತದಲ್ಲೂ ತೆಗೆದುಕೊಂಡಿರುವ ತಪ್ಪು ನಿರ್ಧಾರಗಳಿಂದಾಗಿ ಇಂದು ದೇಶ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವುದನ್ನು ಜನ ಅರಿತಿದ್ದಾರೆ ಎಂದು ಮಂಜುನಾಥ್ ಕುಮಾರ್ ಟೀಕಿಸಿದ್ದಾರೆ.
ಭಾವನಾತ್ಮಕ ವಿಚಾರಗಳನ್ನು ಕೆಣಕಿ, ಸಮಾಜದಲ್ಲಿ ಒಡಕು ಮೂಡಿಸಿ ಅಧಿಕಾರಕ್ಕಾಗಿ ಕ್ಷುಲ್ಲಕ ರಾಜಕಾರಣ ಮಾಡುವ ಚಾಳಿ ಬಿಜೆಪಿಗಿದೆ ಎಂದು ಆರೋಪಿಸಿರುವ ಅವರು, ರಾಜಕೀಯ ಉದ್ದೇಶಕ್ಕಾಗಿ ಪ್ರತಿಭಟನೆ ಮಾಡುವ ಅನಿವಾರ್ಯತೆ ಕಾಂಗ್ರೆಸ್ಸಿಗೆ ಬಂದಿಲ್ಲವೆಂದು ತಿಳಿಸಿದ್ದಾರೆ.
ನಿರಂತರವಾಗಿ ಜನರ ಕಣ್ಣಿಗೆ ಮಣ್ಣು ಹಾಕುವ ಯತ್ನ ಫಲಿಸುವುದಿಲ್ಲ. ಅನೇಕ ವೈಫಲ್ಯಗಳ ನಡುವೆ ದಿಕ್ಕು ತಪ್ಪುತ್ತಿರುವ ಸರ್ಕಾರದಿಂದ ಜನಸಾಮಾನ್ಯರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇತರರಿಗೆ ಬುದ್ಧಿವಾದ ಹೇಳುವ ಬಿಜೆಪಿ ಶಾಸಕರು ಮೊದಲು ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಗಣಿ ದುರಂತ ನಡೆದಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ರಾಜ್ಯದಲ್ಲಿ ಭ್ರಷ್ಟಾಚಾರ, ಅಕ್ರಮ ಚಟುವಟಿಕೆ ಮಿತಿ ಮೀರಿದ್ದು, ಸರ್ಕಾರ ಇದೆಯೇ ಎನ್ನುವ ಬಗ್ಗೆ ಜನವಲಯದಲ್ಲೇ ಸಂಶಯ ಮೂಡಿದೆ ಎಂದು ಮಂಜುನಾಥ್ ಕುಮಾರ್ ಆರೋಪಿಸಿದ್ದಾರೆ.

error: Content is protected !!