ಕನ್ನಡ ಜಾಗೃತಿ ಸಮಿತಿ ಸಭೆ : ಆಡಳಿತದಲ್ಲಿ ಕನ್ನಡ ಭಾಷೆ ಅನುಷ್ಠಾನಕ್ಕೆ ಕ್ರಮ : ಭನ್ವರ್ ಸಿಂಗ್ ಮೀನಾ

23/01/2021

ಮಡಿಕೇರಿ ಜ. 23 : ಕೊಡಗು ಜಿಲ್ಲೆಯ ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸರ್ಕಾರದ ಆಶಯದಂತೆ ಎಲ್ಲಾ ಇಲಾಖೆಗಳಲ್ಲೂ ಕನ್ನಡ ಅನುಷ್ಠಾನಗೊಳಿಸಲು ನಾವೆಲ್ಲಾರು ಶ್ರಮವಹಿಸಬೇಕಾಗಿದೆ. ನಾನು ಉತ್ತರ ಭಾರತದವನಾದರು ಇಲ್ಲಿಗೆ ಬಂದನಂತರ ಆಸಕ್ತಿ ವಹಿಸಿ ಕನ್ನಡ ಕಲಿತಿದ್ದೇನೆ ನನಗೆ ಹೆಮ್ಮೆಯಿದೆ.ಸರ್ಕಾರದಿಂದ ಕನ್ನಡದಲ್ಲಿ ಬರುವ ಸುತ್ತೋಲೆಗಳನ್ನು ಓದುತ್ತೇನೆ,ಕನ್ನಡದಲ್ಲಿಯೇ ಉತ್ತರಿಸುತ್ತೇನೆ ಹಾಗೆಯೇ ಇಲ್ಲಿ ಎಲ್ಲಾರೂ ಕನ್ನಡ ಬಳಸಬೇಕು,ಬೆಳೆಸಬೇಕೆಂದರು.
ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್.ಮಹೇಶ್ ಮಾತನಾಡಿ ಜಿಲ್ಲೆಯ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಖಚೇರಿಗಳಲ್ಲಿ ತಿಂಗಳಿಗೊಮ್ಮೆ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲಿಸುವಂತಾಗಬೇಕು.ಜಿಲ್ಲೆಯ ಬ್ಯಾಂಕ್ಗಳಲ್ಲಿ ಚಲನ್ ಸೇರಿದಂತೆ ನಮೂನೆಗಳೆಲ್ಲಾ ಕನ್ನಡದಲ್ಲಿರುವಂತೆ ಕ್ರಮ ವಹಿಸಬೇಕು.ಅಂಗಡಿ ಮುಂಗಟ್ಟುಗಳ ನಾಮಪಲಕಗಳಲ್ಲಿ ಕನ್ನಡ ಪ್ರದಾನವಾಗಿರುವಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚದೆ ಅವುಗಳ ಅಭಿವೃದ್ಧಿಯಾಗಬೇಕು ಹಾಗೂ ಮಕ್ಕಳು ಕನ್ನಡ ಶಾಲೆಗಳಿಗೆ ಸೇರುವಂತೆ ಪ್ರೇರೇಪಿಸುವ ಯೋಜನೆ ರೂಪಿಸಬೇಕು.
ಒಟ್ಟಿನಲ್ಲಿ ಜಿಲ್ಲೆಯ ಆಡಳಿತದಲ್ಲಿ ಕನ್ನಡ ಅನುಷ್ಠಾನ ಗೊಳ್ಳಬೇಕು ಎಂದರು.
ಸಮಿತಿ ಸದಸ್ಯ ಈ.ರಾಜು ಮಾತನಾಡಿ ಜಿಲ್ಲೆಯ ಗಡಿಭಾಗಗಳಲ್ಲಿ ಕನ್ನಡಕ್ಕೆ ಉತ್ತೇಜನ ನೀಡಬೇಕು.ಅಲ್ಲಿ ಕನ್ನಡದಲ್ಲಿ ಮಾತನಾಡುವ ಮೂಲಕ ನಮ್ಮ ಭಾಷೆಯ ಬೆಳವಣಿಗೆ ಬಗ್ಗೆ ಗಮನ ಹರಿಸಬೇಕೆಂದರು.
ಸಮಿತಿಯ ಮತ್ತೋರ್ವ ಸದಸ್ಯ ಕಾಜೂರು ಸತೀಶ್ ಮಾತನಾಡಿ ಕೋವಿಡ್ ನಂತರ ಸಾಕಷ್ಟು ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ ಅವರನ್ನು ಸರ್ಕಾರಿ ಶಾಲೆಯಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ ಎಂದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಹಾಗೂ ಕನ್ನಡ ಜಾಗೃತಿ ಸಮಿತಿಯ ಕಾರ್ಯದರ್ಶಿ ದರ್ಶನ ಮಾತನಾಡಿ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನ ಗೊಳಿಸಲು ಇಲಾಖೆ ಕರ್ತವ್ಯ ನಿರ್ವಹಿಸುತ್ತಿದೆ ಮುಂದಿನ ದಿನಗಳಲ್ಲಿ ಜಾಗೃತಿ ಸಮಿತಿ ಸದಸ್ಯರೊಡಗೊಡಿ ಉತ್ತಮ ಕೆಲಸಮಾಡಲಾಗುವುದೆಂದರು.
ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಚರ್ಚಿಸಲಾದ ವಿಚಾರಗಳನ್ನು ಕಾರ್ಯಗತಗೊಳಿಸುವಂತೆ ಹಾಗೂ ಸಭೆಯ ನಡಾವಳಿಗಳನ್ನು ಎಲ್ಲಾ ಇಲಾಖೆಗಳಿಗೂ ಕಳುಹಿಸುವಂತೆ ಇಲಾಖೆಯ ಸಹಾಯಕ ನಿದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರುಗಳಾದ ಭಾರತಿ ರಮೇಶ್,ರಂಜಿತಾಕಾರ್ಯಪ್ಪ ಉಪಸ್ಥಿತರಿದ್ದರು.