ಬಿಡುಗಡೆಯಾಗದ ಮಳೆಹಾನಿ ಕಾಮಗಾರಿ ಹಣ : ಗುತ್ತಿಗೆದಾರರ ಅಸಮಾಧಾನ

January 23, 2021

ಮಡಿಕೇರಿ ಜ.23 : 2019-20ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ಪೂರ್ಣಗೊಂಡಿರುವ ಮಳೆಹಾನಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಶೇ.75 ರಷ್ಟು ಹಣವನ್ನು ಪಾವತಿ ಮಾಡಬೇಕೆಂದು ಒತ್ತಾಯಿಸಿರುವ ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘ ಅಧಿಕಾರಿಗಳು ಬೇಡಿಕೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ರವಿ ಚಂಗಪ್ಪ, 2018-19ನೇ ಸಾಲಿನಲ್ಲಿ ಮಳೆಹಾನಿ, ಪಾಕೃತಿಕ ವಿಕೋಪ, ಎನ್.ಡಿ.ಆರ್.ಎಫ್ ಹಾಗೂ ಎಸ್‍ಡಿಆರ್‍ಎಫ್ ಮೂಲಕ ಪಾವತಿಸದಂತೆ ಶೇ.75:25 ಅನುಪಾತದಲ್ಲಿ 2019-20ರಲ್ಲಿ ಪೂರ್ಣಗೊಂಡ ಕಾಮಗಾರಿಗಳು ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರಸ್ತುತ 1066.12 ಲಕ್ಷ ರೂ. ಬಿಡುಗಡೆಯಾಗಿದ್ದು, ಈ ಅನುದಾನವನ್ನು ಕ್ರಮಬದ್ಧವಾಗಿ ಜೆಷ್ಠತೆಗೆ ಅನುಗುಣವಾಗಿ ಸಾಧ್ಯವಾದಷ್ಟು ಗುತ್ತಿಗೆದಾರರಿಗೆ ಶೇ.75 ರಷ್ಟು ಹಣವನ್ನು ಪಾವತಿಸಲು ಕಾರ್ಯಪಾಲ ಅಭಿಯಂತರರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಬೇಕೆಂದು ಮನವಿ ಮಾಡಿದರು.
ಯಾವುದೇ ಕಾಮಗಾರಿಗಳಿಗೆ ಬಿಲ್ ಪಾವತಿಯಾಗದೆ ಈಗಾಗಲೇ ಗುತ್ತಿಗೆದಾರರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ತುರ್ತು ಕಾಮಗಾರಿ ಕೈಗೊಳ್ಳಲು ತೊಂದರೆಯಾಗುತ್ತಿದೆ, ಅಲ್ಲದೆ ಈ ಕಾಮಗಾರಿಗಳಿಗೆ ಸರ್ಕಾರದ ನಿಯಮದಂತೆ ಶೇ. 22ರಷ್ಟು ತೆರಿಗೆ ಕಡಿತಗೊಳ್ಳುವುದರಿಂದ ಗುತ್ತಿಗೆದಾರರು ಮತ್ತಷ್ಟು ಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ 75:25 ಅನುಪಾತದಲ್ಲಿ ಹಣ ಬಿಡುಗಡೆಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ರವಿ ಚಂಗಪ್ಪ ಈ ಬಗ್ಗೆ ಜ.25 ರಂದು ಗುತ್ತಿಗೆದಾರರ ಸಭೆ ನಡೆಸಿ ಅಂತಿಮ ನಿರ್ಧರ ಕೈಗೊಳ್ಳಲಾಗುವುದು. ಶೇ.75ರ ಅನುಪಾತದಲ್ಲಿ ಹಣ ಬಿಡುಗಡೆಯಾಗದಿದ್ದರೆ ಜಿಲ್ಲೆಯಾದ್ಯಂತ ಕಾಮಗಾರಿ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ಶಾಸಕರುಗಳು ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಗಮನ ಸೆಳೆಯಬೇಕೆಂದು ಅವರು ತಿಳಿಸಿದರು.
ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ವಿ.ಎ.ಲಾರೆನ್ಸ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ಗುತ್ತಿಗೆದಾರರು ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಯಾವುದೇ ಜನ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಿ ಸಹಕಾರ ನೀಡುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಿ.ಪಿ.ರಾಜೀವ್ ಲೋಚನ ಹಾಗೂ ಗುತ್ತಿಗೆದಾರ ಬಿ.ಆರ್.ಸದಾಶಿವ ರೈ ಉಪಸ್ಥಿತರಿದ್ದರು.

error: Content is protected !!