ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಜನಪ್ರತಿನಿಧಿಗಳು ವಿಫಲ : ಎ.ಎಸ್. ಪೊನ್ನಣ್ಣ ಆರೋಪ

January 23, 2021

ಪೊನ್ನಂಪೇಟೆ, ಜ.23: ಕೊಡಗನ್ನು ಪ್ರತಿನಿಧಿಸುವ ಸಂಸದರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಜನರ ಸಮಸ್ಯೆ ಪರಿಹರಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅಕಾಲಿಕ ಮಳೆಯಿಂದಾಗಿ ತೀವ್ರ ಸಂಕಷ್ಟದಲ್ಲಿರುವ ಕೊಡಗಿನ ರೈತರ ಅದರಲ್ಲೂ ಕಾಫಿ ಬೆಳೆಗಾರರ ಹಿತ ಕಾಪಾಡುವ ಬದಲು ಇದೀಗ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವ ಹಿಂದಿರುವ ರಹಸ್ಯ ಏನೆಂದು ತಿಳಿಯುತ್ತಿಲ್ಲ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರೂ ಆಗಿರುವ ಕೆಪಿಸಿಸಿ ವಕ್ತಾರರಾದ, ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ಆರೋಪಿಸಿದ್ದಾರೆ.

ಗೋಣಿಕೊಪ್ಪಲಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ರೈತರು ಮತ್ತು ಕಾರ್ಮಿಕರು ಇದೀಗ ಹಿಂದೆಂದಿಗಿಂತಲೂ ತೀವ್ರ ರೀತಿಯ ಸಮಸ್ಯೆಯನ್ನು ಎದುರಿಸುವಂತಾಗಿದೆ. ಈ ಮಧ್ಯೆ ಕಳೆದ ಕೆಲ ಸಮಯದಿಂದ ಅಕಾಲಿಕವಾಗಿ ಮಳೆಯಾಗುತ್ತಿರುವುದು ಬೆಳೆಗಾರರನ್ನು ಮತ್ತಷ್ಟು ದೊಡ್ಡ ಸಮಸ್ಯೆಗೆ ದೂಡಿದಂತಾಗಿದೆ. ಈ ಬಗ್ಗೆ ಜಿಲ್ಲೆಯಾದ್ಯಂತ ಜನ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದರೂ ಸಮಸ್ಯೆಯ ಪರಿಹಾರಕ್ಕೆ ಸರಕಾರದ ಮಟ್ಟದಲ್ಲಿ ವಿಶೇಷ ನೀತಿ ರೂಪಿಸಬೇಕಾದ ಸಂಸದರು ಮತ್ತು ಶಾಸಕರು ಕೈಕಟ್ಟಿ ಕುಳಿತರೆ ಕೊಡಗಿನ ಜನರ ಗತಿಯೇನು ಎಂದು ಪೊನ್ನಣ್ಣ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿ ಅಕಾಲಿಕವಾಗಿ ರೈತರಿಗೆ ಸಂಕಷ್ಟ ಎದುರಾದರೆ ತುರ್ತು ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಮೀಸಲಿಟ್ಟ ಅನುದಾನವಿರುತ್ತದೆ. ಇದನ್ನು ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಒತ್ತಡ ತಂದು ರೈತರ ಸಮಸ್ಯೆ ಪರಿಹರಿಸಲು ಅನುದಾನ ಬಿಡುಗಡೆಗೊಳಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಆದರೆ ಇದೆಲ್ಲದರಿಂದ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ವಿಮುಖರಾಗಿರುವುದು ಜಿಲ್ಲೆಯ ಜನತೆಯ ದೌರ್ಭಾಗ್ಯವಾಗಿದೆ. ಅಧಿಕಾರಿಗಳನ್ನು ನಿಯಂತ್ರಿಸಲಾಗದ ಜನಪ್ರತಿನಿಧಿಗಳು ತಮ್ಮ ಹೊಣೆಗಾರಿಕೆ ನಿರ್ವಹಿಸಲು ವಿಫಲರಾಗಿರುವುದು ಜಿಲ್ಲೆಯ ದುರಂತ ಎಂದು ಕಿಡಿಕಾರಿದ ಅವರು, ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದ್ದರೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಜನರ ಪರವಾಗಿ ಧ್ವನಿ ಎತ್ತದಿರುವುದು ಅಚ್ಚರಿ ಮೂಡಿಸಿದೆ. ಯಾರನ್ನು ಮೆಚ್ಚಿಸುವುದಕ್ಕಾಗಿ ಜನಪ್ರತಿನಿಧಿಗಳ ಈ ಮೌನ ಎಂಬುದು ಅರ್ಥವಾಗುತ್ತಿಲ್ಲ ಎಂದು ಅವರು ವಿಷಾದದಿಂದ ಹೇಳಿದರು.

ಅಕಾಲಿಕ ಮಳೆ ಮತ್ತು ಬೆಲೆ ಕುಸಿತದಿಂದ ಭತ್ತ, ಕಾಫಿ ಮತ್ತು ಕರಿಮೆಣಸು ಉದ್ಯಮ ತೀವ್ರ ಸಂಕಷ್ಟದಲ್ಲಿದೆ. ಆದರೂ ಬೆಳೆಗಾರರ ಹಿತ ಕಾಯುವಲ್ಲಿ ಸರಕಾರ ನಿರ್ಲಕ್ಷ್ಯ ವಹಿಸಿದೆ. ಇದರಿಂದಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನ್ಯಾಯಯುತವಾದ ಹೋರಾಟವೊಂದೇ ಉಳಿದಿರುವ ಮಾರ್ಗ ಎಂದು ಅಭಿಪ್ರಾಯಪಟ್ಟಿರುವ ಪೊನ್ನಣ್ಣ ಅವರು, ಕಾಫಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಕೊಡಗು ರೈತ ಸಂಘದ ವತಿಯಿಂದ ಇದೇ ತಿಂಗಳ 25ರಂದು ಸೋಮವಾರ ಕುಟ್ಟದಿಂದ ಬೆಂಗಳೂರಿಗೆ ತೆರಳಲಿರುವ ರೈತ ವಾಹನ ಜಾಥಕ್ಕೆ ಕಾಂಗ್ರೆಸ್ ಪಕ್ಷ ಪೂರ್ಣ ಬೆಂಬಲ ನೀಡಲಿದೆ ಎಂದು ಘೋಷಿಸಿದರಲ್ಲದೆ, ಇದಕ್ಕೂ ಸರಕಾರ ಸ್ಪಂದಿಸದಿದ್ದಲ್ಲಿ ಮುಂದೆ ತೀವ್ರ ರೀತಿಯ ಪ್ರತಿಭಟನೆಯನ್ನು ಪಕ್ಷದ ವತಿಯಿಂದ ಆಯೋಜಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕೇರಳ ಸರಕಾರ ತನ್ನ ಪ್ರಸಕ್ತ ಬಜೆಟ್ ನಲ್ಲಿ ಕಾಫಿಗೆ ಬೆಂಬಲ ಬೆಲೆ ಯೋಜನೆ ಘೋಷಿಸಿದ್ದು ಸ್ವಾಗತಾರ್ಹ. ಇದೇ ಮಾದರಿಯನ್ನು ರಾಜ್ಯ ಸರಕಾರ ಅನುಸರಿಸಿ ಕರ್ನಾಟಕದಲ್ಲಿಯೂ ಕಾಫಿಗೆ ಬೆಂಬಲ ಬೆಲೆ ಘೋಷಿಸಬೇಕು. ಇದೀಗ ಮಾರ್ಚ್ ತಿಂಗಳು ಸಮೀಪಿಸುತ್ತಿರುವುದರಿಂದ ರೈತರ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಸರಕಾರ ವಿಶೇಷ ವಿನಾಯಿತಿ ಯೋಜನೆ ಪ್ರಕಟಿಸಬೇಕು. ಕಳೆದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಘೋಷಿಸಿದ ಸಾಲ ಮನ್ನಾ ಯೋಜನೆ ರಾಜ್ಯದ ಉಳಿದೆಲ್ಲಾ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದೆ. ಆದರೆ ಕೊಡಗಿನಲ್ಲಿ ಮಾತ್ರ ಶೇ. 30%ರಷ್ಟು ಮಾತ್ರ ರೈತರಿಗೆ ಇದರ ಪ್ರಯೋಜನ ದೊರೆತಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಉಳಿದ ಅರ್ಹ ರೈತರಿಗೆ ಸಾಲ ಮನ್ನಾ ಯೋಜನೆಯ ಪ್ರಯೋಜನವನ್ನು ಒದಗಿಸಬೇಕು. ಹಾಲಿ ಹಣಕಾಸು ವರ್ಷಾಂತ್ಯದಲ್ಲಿ ರೈತರು ಮರು ಪಾವತಿಸಬೇಕಾಗಿರುವ ಸಾಲದ ಬಗ್ಗೆ ರಾಜ್ಯ ಸರಕಾರ ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದ ಪೊನ್ನಣ್ಣ ಅವರು, ಸಾಲ ವಸೂಲಾತಿ ನೆಪದಲ್ಲಿ ಬ್ಯಾಂಕಿನವರು ರೈತರನ್ನು ಪೀಡಿಸಿ ದೌರ್ಜನ್ಯವೆಸಗದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಬ್ಯಾಂಕಿನವರು ರೈತರ ಭಾವನೆಯನ್ನು ಅರ್ಥಮಾಡಿಕೊಳ್ಳದೆ ಬಲವಂತದ ಸಾಲ ವಸೂಲಾತಿಗೆ ಮುಂದಾದರೆ ಕಾನೂನು ಹೋರಾಟದ ಮೂಲಕ ನ್ಯಾಯಾಲಯದ ರಕ್ಷಣೆ ಒದಗಿಸಲು ತಾನು ಸಿದ್ಧವಿರುವುದಾಗಿ ತಿಳಿಸಿದರು.

ಇದುವರೆಗೂ ಸರಕಾರ ತಾನಾಗಿಯೇ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ಹೋರಾಟ-ಪ್ರತಿಭಟನೆಗಳ ಮೂಲಕ ಮಾತ್ರ ಸರಕಾರವನ್ನು ನಿದ್ದೆಯಿಂದ ಎಬ್ಬಿಸಿಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ಇದೀಗ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಐತಿಹಾಸಿಕ ಹೋರಾಟ ಸರಕಾರದ ಚಳಿ ಬಿಡಿಸುತ್ತಿದೆ. ಕಳೆದ4 ದಿನಗಳ ಹಿಂದೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ರೈತರ ಪ್ರತಿಭಟನೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಸಂಘಟಿತ ಜನಶಕ್ತಿಯ ಮುಂದೆ ಸರಕಾರದ ಜನವಿರೋಧಿ ಧೋರಣೆ ಜಯಿಸುವುದಿಲ್ಲ ಎಂಬ ಸಂದೇಶ ರವಾನೆಯಾಗಿದೆ ಎಂದು ತಿಳಿಸಿದ ಪೊನ್ನಣ್ಣ ಅವರು, ಕೊಡಗಿನ ರೈತ ಮತ್ತು ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಜಿಲ್ಲೆಯಲ್ಲಿ ‘ಬೆಂಗಳೂರು ಮಾದರಿ’ ಬೃಹತ್ ಪ್ರತಿಭಟನೆ ಆಯೋಜಿಸಲು ಕಾಂಗ್ರೆಸ್ ಪಕ್ಷ ಸಿದ್ಧವಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿದ ಮಾಜಿ ಶಾಸಕ ಸಿ. ಎಸ್. ಅರುಣ್ ಮಾಚಯ್ಯ ಅವರು ಮಾತನಾಡಿ, ದೇಶದಲ್ಲೇ ಅತೀ ಹೆಚ್ಚು ಕಾಫಿ ಬೆಳೆಯುವ ಕರ್ನಾಟಕದಲ್ಲಿ ಕಾಫಿ ಬೆಳೆಗಾರರ ಸ್ಥಿತಿ ಶೋಚನೀಯವಾಗಿದೆ. ರಾಜ್ಯದಲ್ಲಿ ಪ್ರತಿ ವರ್ಷ 3 ಲಕ್ಷ ಮೆಟ್ರಿಕ್ ಟನ್ ಕಾಫಿಯನ್ನು ಪರಿಷ್ಕರಿಸುವ ಮೂಲಕ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ವರಮಾನ ನೀಡುತ್ತಿದ್ದರೂ ರಾಜ್ಯ ಸರಕಾರ ಕಾಫಿ ಉದ್ಯಮವನ್ನು ಹಿಂದಿನಿಂದಲೂ ನಿರ್ಲಕ್ಷಿಸುತ್ತಾ ಬರುತ್ತಿದೆ. ರಾಜ್ಯದ ಕಾಫಿಯನ್ನು ಹೊರದೇಶಕ್ಕೆ ರಪ್ತು ಮಾಡುವುದರಿಂದ ಪ್ರತಿವರ್ಷ ಕೋಟ್ಯಂತರ ಮೊತ್ತದ ವಿದೇಶಿ ವಿನಿಮಯ ಮೊತ್ತ ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತಿದೆಯೇ ವಿನಾ ಬೆಳಗಾರರ ಬದುಕು ಮಾತ್ರ ಇದುವರೆಗೂ ಹಸನಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಫಿ ಉದ್ಯಮದ ಪುನಶ್ಚೇತನದ ಬೇಡಿಕೆ ಮುಂದಿಟ್ಟರೆ ಅದು ಕೇಂದ್ರದ ಹೊಣೆ ಎಂದು ರಾಜ್ಯ ಸರಕಾರ ನುಣುಚಿಕೊಳ್ಳುತ್ತಿರುವುದು ನಾಚಿಕೆಗೇಡು. ಸರಕಾರಕ್ಕೆ ಕಾಫಿ ಬೆಳೆಗಾರರ ಹಿತ ಕಾಪಾಡುವ ಇಚ್ಛಾಶಕ್ತಿ ಇದ್ದರೆ ಕೇರಳದಂತೆ ಕಾಫಿಗೂ ಬೆಂಬಲ ಬೆಲೆ ಘೋಷಿಸಲಿ. ಅದು ಬಿಟ್ಟು ರೈತರು ಮತ್ತು ಜನಸಾಮಾನ್ಯರು ತಮ್ಮ ಸಮಸ್ಯೆ ಪರಿಹಾರಕ್ಕೆ ವಿವಿಧ ಬೇಡಿಕೆಯನ್ನು ಮುಂದಿಟ್ಟು ಜನಾಂದೋಲನ ರೂಪಿಸಿದರೆ, ಭಾವನಾತ್ಮಕವಾದ ವಿಚಾರವನ್ನು ಪ್ರಸ್ತಾಪಿಸಿ ಜನರ ಗಮನ ಬೇರೆಡೆಗೆ ಸೆಳೆಯುವುದನ್ನು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರ ಕೂಡಲೇ ನಿಲ್ಲಿಸಲಿ ಎಂದು ಆಗ್ರಹಿಸಿರುವ ಅರುಣ್ ಮಾಚಯ್ಯ ಅವರು, ಪೆಟ್ರೋಲ್, ಡೀಸೆಲ್,ಅಡುಗೆ ಅನಿಲ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದರೂ ಈ ಬಗ್ಗೆ ಆಡಳಿತರೂಢ ಪಕ್ಷ ಏಕೆ ಚಕಾರವೆತ್ತುತ್ತಿಲ್ಲ? ಎಂದು ಪ್ರಶ್ನಿಸಿದರು.

ಜನಸಾಮಾನ್ಯರ ಜ್ವಲಂತ ಸಮಸ್ಯೆಯ ವಿಚಾರ ಬಂದಾಗಲೆಲ್ಲ ಕಾಂಗ್ರೆಸ್ ಪಕ್ಷ ಇದುವರೆಗೂ ಏನು ಮಾಡಿದೆ ಎಂದು ಬಿಜೆಪಿಯವರು ಪದೇ ಪದೇ ಪ್ರಶ್ನಿಸುತ್ತಿದ್ದಾರೆ. ಆದರೆ ಯಾವುದೇ ಸದನ ಸಮಿತಿಯು ರಚಿಸದೆ, ಸಂಸತ್ತಿನಲ್ಲಿ ಸಮಗ್ರ ಚರ್ಚೆಯೂ ನಡೆಸದೆ ಕೃಷಿ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಸರಕಾರದ ರೈತ ವಿರೋಧಿ ಧೋರಣೆಯ ಬಗ್ಗೆ ಬಿಜೆಪಿಯ ನಿಲುವೇನು?. ಉದ್ಯೋಗ ನೀಡುವಲ್ಲಿ ಸಂಪೂರ್ಣ ವಿಫಲವಾಗುವ ಮೂಲಕ ಬಿಎಸ್ಎನ್ಎಲ್ ಸೇರಿದಂತೆ ಸರಕಾರಿ ಸ್ವಾಮ್ಯದ ಕಂಪನಿಗಳನ್ನು ಮುಚ್ಚಲು ಹೊರಟಿರುವ ಕೇಂದ್ರ ಸರಕಾರದ ಬಂಡವಾಳಶಾಹಿ ಪರವಾದ ನೀತಿ ಕುರಿತು ಬಿಜೆಪಿ ಪಕ್ಷ ತನ್ನ ಅಭಿಪ್ರಾಯವನ್ನು ಜನತೆಯ ಮುಂದೆ ಸ್ಪಷ್ಟಪಡಿಸಲಿ ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು

ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ, ವಕ್ತಾರರಾದ ಟಾಟು ಮೊಣ್ಣಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮೀದೇರಿರ ನವೀನ್, ಜಿ. ಪಂ. ಸದಸ್ಯರಾದ ಬಿ. ಎನ್. ಪ್ರತ್ಯು, ಪಿ. ಕೆ. ಪಂಕಜ, ಕಾಂಗ್ರೆಸ್ ಮುಖಂಡರಾದ ಧರ್ಮಜ ಉತ್ತಪ್ಪ, ಶಾಜಿ ಅಚ್ಚುತ್ತನ್, ಮುಕ್ಕಾಟಿರ ಸಂದೀಪ್, ಮೂಕಳೇರ ಭಾರತಿ ಮೊದಲಾದವರು ಉಪಸ್ಥಿತರಿದ್ದರು.

error: Content is protected !!