ಕೃಷಿ ಕಾಯ್ದೆ, ಬೆಲೆ ಏರಿಕೆ ವಿರುದ್ಧ ಕುಶಾಲನಗರದಲ್ಲಿ ಪ್ರತಿಭಟನೆ

January 24, 2021

ಮಡಿಕೇರಿ ಜ.24 : ರೈತ ವಿರೋಧಿ ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ, ಬೆಲೆ ಏರಿಕೆ ಖಂಡಿಸಿ ಮತ್ತು ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭmನೆ ಬೆಂಬಲಿಸಿ ಕೊಡಗು ಜಿಲ್ಲಾ ಪ್ರಗತಿಪರ ಜನಾಂದೋಲನ ವೇದಿಕೆ ಆಶ್ರಯದಲ್ಲಿ ಕುಶಾಲನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ವೇದಿಕೆ ಸಂಚಾಲಕ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಕುಶಾಲನಗರದಲ್ಲಿ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಪ್ರತಿಭಟನಾಕಾರರು ಕೇಂದ್ರ ಸರಕಾರದ ಬೆಲೆ ಏರಿಕೆ, ರೈತ ವಿರೋಧಿ ಕಾಯ್ದೆಗಳ ಅನುಷ್ಠಾನ ವಿರುದ್ಧ ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸಿದರು. ಫೀಲ್ಡ್ ಮಾರ್ಷಲ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಮೋದಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ರಥಬೀದಿ ಮೂಲಕ ನಾಡಕಛೇರಿಗೆ ತೆರಳಿದ ಪ್ರತಿಭಟನಾಕಾರರು ರೈತ ವಿರೋಧಿ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಕಂದಾಯ ಅಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ವಿ.ಪಿ.ಶಶಿಧರ್ ಮಾತನಾಡಿ, ನರೇಂದ್ರ ಮೋದಿ ಸರಕಾರ ದೇಶದ ಆರ್ಥಿಕ ಸ್ಥಿತಿಯನ್ನು ಹದಗೆಡಿಸುತ್ತಿದೆ. ಜನಸಾಮಾನ್ಯರು, ಬಡವರು, ರೈತ ವಿರೋಧಿ ಕಾಯ್ದೆಗಳನ್ನು ರೂಪಿಸಿ ಅಂಬಾನಿ ಮತ್ತು ಅದಾನಿ ಒಡೆತನದ ಸಂಸ್ಥೆಗಳಿಗೆ ಅನುಕೂಲ ಒದಗಿಸುತ್ತಿದೆ. ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ಕಳೆದೆರೆಡು ತಿಂಗಳಿನಿಂದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕಿಂಚಿತ್ತೂ ಮನ್ನಣೆ ನೀಡಿಲ್ಲ. ಹೋರಾಟದಲ್ಲಿ ಹಲವು ರೈತರು ಮೃತಪಟ್ಟರೂ ಕೂಡ ಮೋದಿ ಜನಸೇವಕನೆಂಬುದು ಮರೆತು ನಿರಂಕುಶವಾದಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೆ ರೈತರ ಹೋರಾಟಕ್ಕೆ ಸ್ಪಂದಿಸಿ ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದರೊಂದಿಗೆ ಕೃಷಿ ಮಸೂದೆ ಹಿಂಪಡೆದುಕೊಳ್ಳಬೇಕಿದೆ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಲತೀಫ್, ಜನಪ್ರತಿನಿಧಿಗಳಾದ ಆನಂದಕುಮಾರ್, ಫಿಲೋಮಿನಾ, ಎಂ.ಡಿ.ರಮೇಶ್, ಕುಂಞಕುಟ್ಟಿ, ವೇದಿಕೆ ಪ್ರಮುಖರಾದ ಇಸಾಖ್ ಖಾನ್, ಸಿ.ಎಲ್.ವಿಶ್ವ, ಮಂಜುನಾಥ್ ಗುಂಡುರಾವ್, ಜೋಸೆಫ್ ವಿಕ್ಟರ್ ಸೋನ್ಸ್, ರಾಯ್ ಡೇವಿಡ್, ಕೆ.ಎನ್.ಅಶೋಕ್, ರಾಮಚಂದ್ರ, ಕೆ.ಬಿ.ರಾಜು, ಅನಿತಾ, ರಾಜೇಶ್ ಮತ್ತು ವೇದಿಕೆ ಸದಸ್ಯರು ಹಾಜರಿದ್ದರು.

error: Content is protected !!