ಸಾಗರದಲ್ಲಿ ರಾಜ್ಯದ ಎರಡನೇ ಅತಿದೊಡ್ಡ ಧ್ವಜಸ್ತಂಭ : ಜ.26ರಂದು ಲೋಕಾರ್ಪಣೆ

January 25, 2021

ಸಾಗರ: ನಗರದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬಿ.ಎಚ್‌. ರಸ್ತೆಯ ಗಣಪತಿ ಕೆರೆ ಪಕ್ಕದಲ್ಲಿ 159 ಅಡಿ ಎತ್ತರದಲ್ಲಿ 30* 45 ಅಡಿ ಅಳತೆಯ ಬೃಹತ್‌ ರಾಷ್ಟ್ರಧ್ವಜ ನಿರಂತರ ಹಾರಾಡುವ ಅತ್ಯಾಕರ್ಷಕ ವ್ಯವಸ್ಥೆ ಲೋಕಾರ್ಪಣೆಗೆ ಸಜ್ಜುಗೊಂಡಿದೆ.

ಎಂಎಸ್‌ಐಎಲ್‌ ಅಧ್ಯಕ್ಷ, ಶಾಸಕ ಎಚ್‌.ಹಾಲಪ್ಪ ಅವರ ಮಹಾತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಜ 26ರಂದು ಶಾಶ್ವತ ಹಾರಾಟ ವ್ಯವಸ್ಥೆಗೆ ಚಾಲನೆ ಸಿಗಲಿದೆ.

ಪ್ರಾಯೋಗಿಕವಾಗಿ 2020 ಆಗಸ್ಟ್‌ 15ರಂದು ಶಾಸಕ ಎಚ್‌.ಹಾಲಪ್ಪ ನಡೆಸಿದ ಪರೀಕ್ಷೆ ಯಶಸ್ವಿಯಾಗಿತ್ತು. ಧ್ವಜಸ್ತಂಭದ ಸುತ್ತಲೂ ಆಕರ್ಷಕ ಉದ್ಯಾನವನ ನಿರ್ಮಾಣ, ಬೆಳಕಿನ ವ್ಯವಸ್ಥೆ ಇನ್ನಿತೆ ಕಾಮಗಾರಿ ನಡೆಯುತ್ತಿದೆ. ರಾತ್ರಿವೇಳೆ ವಿದ್ಯುತ್‌ ದೀಪದ ಬೆಳಕಿನಲ್ಲಿ ಸಹ ರಾಷ್ಟ್ರಧ್ವಜ ಕಂಗೊಳಿಸಲಿದೆ.

ಒಟ್ಟು ವ್ಯವಸ್ಥೆಗೆ ಸುಮಾರು 87 ಲಕ್ಷ ರೂ. ವೆಚ್ಚ ತಗುಲಲಿದೆ. ನಗರಸಭೆ ಆಯುಕ್ತ ಎಚ್‌.ಕೆ.ನಾಗಪ್ಪ, ಅಭಿಯಂತರ ವಿಠ್ಠಲ್‌ ಹೆಗಡೆ ಮತ್ತಿತರೆ ಅಧಿಕಾರಿಗಳ ತಂಡ ಪೂರಕ ತಾಂತ್ರಿಕ ಹೊಣೆ ನಿಭಾಯಿಸಿದೆ. ಶಾಸಕರ ಮಾರ್ಗದರ್ಶನದ ದೊಡ್ಡ ಕಾರ‍್ಯಪಡೆ ನಿರಂತರವಾಗಿ ಸ್ವಯಂಸೇವಾ ಕಾರ‍್ಯದಲ್ಲಿ ತೊಡಗಿದೆ.

ಧ್ವಜಸ್ಥಂಭ ನಿರ್ಮಾಣ ಕಾಮಗಾರಿಯನ್ನು ಮುಂಬಯಿನ ಬಜಾಜ್‌ ಎಲೆಕ್ಟ್ರಿಕಲ್‌ ಕಂಪನಿ ನಿರ್ವಹಿಸಿದೆ. ಉದ್ಯಾನವನ, ಸಣ್ಣ ಕೆರೆ, ಆಸನದ ವ್ಯವಸ್ಥೆ, ವಾಕಿಂಗ್‌ ಪಾಥ್‌, ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬೆಳಗಾವಿಯಲ್ಲಿ 180 ಅಡಿ ಎತ್ತರದ ಧ್ವಜಸ್ತಂಭವಿದೆ. ಸಾಗರದಲ್ಲಿ 159 ಅಡಿ ಎತ್ತರದ ಧ್ವಜಸ್ತಂಭ ಸ್ಥಾಪಿಸಿದ್ದು, ರಾಜ್ಯದಲ್ಲಿ ಎರಡನೇ ಅತಿದೊಡ್ಡ ಧ್ವಜಸ್ತಂಭ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಖಾದಿ ಧ್ವಜ ವರ್ಷಪೂರ್ತಿ ಹಾರಾಡಲಿದ್ದು, 5 ಧ್ವಜಗಳನ್ನು ಮುಂಜಾಗ್ರತೆಯಾಗಿ ಸಂಗ್ರಹಿಸಿಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಗೆ ವಿಶಾಲ ಗಣಪತಿ ಕೆರೆ ಮತ್ತೊಂದು ಬದಿಗೆ ಬೃಹತ್‌ ರಾಷ್ಟ್ರಧ್ವಜ ನಗರದ ಲ್ಯಾಂಡ್‌ಮಾರ್ಕ್ ಆಗಿ ಆಕರ್ಷಣೆಯ ಕೇಂದ್ರವಾಗಲಿದೆ.

error: Content is protected !!