ಮಡಿಕೇರಿಯಲ್ಲಿ ನಾಗರಿಕ ಬಂದೂಕು ತರಬೇತಿ ಶಿಬಿರ ಸಮಾರೋಪ

25/01/2021

ಮಡಿಕೇರಿ ಜ.25 : ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಸೋಮವಾರಪೇಟೆ ತಾಲ್ಲೂಕು ಬಳಗುಂದ ಸ.ಹಿ.ಪ್ರಾ ಶಾಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಕೊಡಗು ಜಿಲ್ಲಾ ಸಶಸ್ತ್ರ ದಳದ ಆರ್.ಪಿ.ಐ ಎಸ್.ರಾಚಯ್ಯ ಅವರ ನೇತೃತ್ವದಲ್ಲಿ ಜಿಲ್ಲಾ ಶಸ್ತ್ರಾಗಾರ ವಿಭಾಗದ ಎ.ಆರ್.ಎಸ್.ಐ ವೆಂಕಪ್ಪ, ಸಿಬ್ಬಂದಿಗಳಾದ ಬಿ.ಬಿ ಜಗದೀಶ್ ಮತ್ತು ಎಂ.ಡಿ ಅಭಿನ್ ಆರು ದಿನಗಳ ಕಾಲ ಆಸಕ್ತ ನಾಗರಿಕರಿಗೆ ಬಂದೂಕು ತರಬೇತಿಯನ್ನು ನೀಡಿದರು.
ತರಬೇತಿ ಶಿಬಿರದಲ್ಲಿ ಪುರುಷರು ಹಾಗೂ ಮಹಿಳೆಯರು ಪಾಲ್ಗೊಂಡು ಬಂದೂಕುಗಳ ಮಾಹಿತಿ ಹಾಗೂ ಉಪಯೋಗಿಸುವ ಬಗ್ಗೆ ತರಬೇತಿಯನ್ನು ಪಡೆದಿದ್ದು, ಬಂದೂಕು ತರಬೇತಿ ಪಡೆದ ಎಲ್ಲರಿಗೂ ಪ್ರಮಾಣ ಪತ್ರಗಳನ್ನು ವಿತರಿಸಿ ಉತ್ತಮ ಪ್ರದರ್ಶನ ನೀಡಿದ ಶಿಬಿರಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಪಾಲ್ಗೊಂಡು ತರಬೇತಿ ಪೂರೈಸಿದವರಿಗೆ ಪ್ರಮಾಣ ಪತ್ರ ವಿತರಿಸಿದರು.
ಮಡಿಕೇರಿ ಉಪವಿಭಾಗ ಡಿವೈ.ಎಸ್.ಪಿ ದಿನೇಶ್ ಕುಮಾರ್, ಆರ್.ಪಿ.ಐ ರಾಚಯ್ಯ ಹಾಗೂ ಇತರ ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.