ಮಡಿಕೇರಿಯಲ್ಲಿ ಅರೆಭಾಷೆ ವಿಶ್ವಕೋಶ ತಯಾರಿ ಕಾರ್ಯಾಗಾರ

January 25, 2021

ಮಡಿಕೇರಿ ಜ.25 : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಅರೆಭಾಷೆ ವಿಶ್ವಕೋಶ ತಯಾರಿ ಕಾರ್ಯಾಗಾರವು ನಗರದ ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಕನ್ನಡ ವಿಷಯ ವಿಶ್ವಕೋಶದ ತಯಾರಿಯಲ್ಲಿ 38 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಹಾ.ತಿ.ಕೃಷ್ಣೇಗೌಡ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅರೆಭಾಷೆ ವಿಶ್ವಕೋಶ ಹೇಗಿರಬೇಕು? ಅದರ ತಯಾರಿಯ ಸ್ವರೂಪ-ಆಕಾರ-ರಚನೆ-ಸಾಧ್ಯತೆ ಮತ್ತು ಸಂಪಾದಕರು ಕುರಿತಂತೆ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು.
ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಹಾ.ತಿ.ಕೃಷ್ಣೇಗೌಡ ಅವರು ಮಾತನಾಡಿ ಕನ್ನಡದಂತಹ ಭಾಷೆಗೆ ವಿಶ್ವಕೋಶವನ್ನು ತಯಾರಿಸುವುದು ಕಷ್ಟದ ಕೆಲಸವಾಗಿತ್ತು. ಅರೆಭಾಷೆ ಕನ್ನಡದ ಉಪಭಾಷೆಯಾಗಿದ್ದು, ಉಪಭಾಷೆಯೊಂದರಲ್ಲಿ ವಿಶ್ವಕೋಶವೊಂದು ತಯಾರಾಗುವುದು ಭಾರತ ದೇಶದಲ್ಲೇ ಮೊದಲ ಪ್ರಯತ್ನ ಎಂದರು.
ಅರೆಭಾಷೆ ವಿಶ್ವಕೋಶವು ಭಾಷೆಮತ್ತು ಪ್ರದೇಶದ ಅಸ್ಮಿತೆಯಾಗಿದ್ದು ವಿಶ್ವಕೋಶದ ರಚನೆಯಿಂದ ಒಂದು ಭಾಷೆಯ ಸಂಸ್ಕøತಿ, ಪ್ರಕೃತಿ, ಬದುಕು ಮತ್ತಿತರ ದಾಖಲಿಸಿ ಮುಂದಿನ ಜನಾಂಗಕ್ಕೆ ಮಾಹಿತಿಯನ್ನು ನೀಡುವ ಮೈಲುಗಲ್ಲಾಗಬೇಕು ಎಂದು ಅವರು ಹೇಳಿದರು.
ಸಾಂಸ್ಕೃತಿಕ ಮತ್ತು ಚಾರಿತ್ರಿಕವಾದ ಭಿನ್ನಾಂಶಗಳನ್ನು ಮತ್ತು ಈ ಪ್ರದೇಶದ ಐತಿಹ್ಯಗಳನ್ನು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿ ಉತ್ತಮವಾದ ವಿಶ್ವಕೋಶ ರಚಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಡೆಗದ್ದೆ ಅವರು ಮಾತನಾಡಿ ಅರೆಭಾಷೆ ಅಕಾಡೆಮಿಯ ಹಲವು ಯೋಜನೆಗಳಲ್ಲಿ ವಿಶ್ವಕೋಶ ರಚನೆಯು ಒಂದಾಗಿದ್ದು, ಅರೆಭಾಷೆ ನಿಘಂಟನ್ನು ಒಳಗೊಂಡಂತೆ ಈ ಅವಧಿಯಲ್ಲಿ ಸರ್ಕಾರದ ಸೂಚನೆಯಂತೆ ಶೈಕ್ಷಣಿಕ ಚಟುವಟಿಕೆಗಳಿಗೆ ಒತ್ತು ಕೊಡಲಾಗಿದೆ ಎಂದು ತಿಳಿಸಿದರು.
ಅರೆಭಾಷೆ ಐಎಸ್‍ಒ ಕೋಡ್ ಕಾರ್ಯಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗಿದೆ. ಅರೆಭಾಷೆ ಸಮುದಾಯ ಮತ್ತು ಪರಿಸರದವರು ಅಕಾಡೆಮಿಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಅರೆಭಾಷೆ ಬರಹಗಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಉಪಯುಕ್ತ ಸಲಹೆ ನೀಡಿದರು.
ಅಕಾಡಮಿ ಸದಸ್ಯರಾದ ಜಾನಕಿ ಬೆಳ್ಯಪ್ಪ ಬೈತಡ್ಕ ಮತ್ತು ಧನಂಜಯ ಅಗೋಳಿಕಜೆ ಉಪಸ್ಥಿತರಿದ್ದರು. ಅರೆಭಾಷೆ ವಿಶ್ವಕೋಶ ತಯಾರಿಯ ಸಂಚಾಲಕರಾದ ಡಾ.ಪುರುಷೋತ್ತಮ ಕೆ.ವಿ. ಕರಂಗಲ್ಲು ಸ್ವಾಗತಿಸಿದರು. ಅಕಾಡೆಮಿ ಸದಸ್ಯರಾದ ಡಾ.ವಿಶ್ವನಾಥ ಬದಿಕಾನ ಇವರು ಕಾರ್ಯಕ್ರಮ ನಿರೂಪಿಸಿದರು ಮತ್ತು ವಂದಿಸಿದರು.

error: Content is protected !!