ಕೊಡಗು ಪೊಲೀಸ್ ಇಲಾಖೆಯಿಂದ ರಾಷ್ಟ್ರೀಯ ಮತದಾರರ ದಿನ ಆಚರಣೆ

January 25, 2021

ಮಡಿಕೇರಿ ಜ.25 : ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ “ರಾಷ್ಟ್ರೀಯ ಮತದಾರರ ದಿನ” ವನ್ನು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯವರು ಪಾಲ್ಗೊಂಡು ಪ್ರತಿಜ್ಞೆ ಸ್ವೀಕರಿಸಿದರು. ಮಡಿಕೇರಿ ಉಪವಿಭಾಗದ ಪೊಲೀಸ್ ಉಪಅಧೀಕ್ಷಕರಾದ ಬಿ.ಪಿ ದಿನೇಶ್ ಕುಮಾರ್ ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞೆ ಯನ್ನು ಬೋಧಿಸಿದರು.
18 ವರ್ಷಕ್ಕೆ ಮೇಲ್ಪಟ್ಟ ಎಲ್ಲ ಭಾರತೀಯ ನಾಗರೀಕರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡು ಚುನಾವಣಾ ಸಂದರ್ಭದಲ್ಲಿ ಖಡ್ಡಾಯವಾಗಿ ಮತದಾನ ಮಾಡಬೇಕೆಂಬ ಸಂದೇಶ ಸಾರುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.
ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ತರವಾದುದು. ಮತದಾನ ಜನರ ಪ್ರಮುಖ ಹಕ್ಕು. ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಜನರ ಆಶೋತ್ತರಗಳಂತೆಯೇ ನಡೆಯಬೇಕೆಂಬುದು ಸಂವಿಧಾನದ ನಿಯಮ. ತಮ್ಮ ಒಳಿತನ್ನು ಬಯಸುವ ಜನಪರ ನಾಯಕನನ್ನು ಆಯ್ಕೆ ಮಾಡಲು ಮತದಾನ ಪ್ರಕ್ರಿಯೆ ನಡೆಯುತ್ತದೆ.
ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ಪ್ರತಿವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.
ಭಾರತದ ಚುನಾವಣಾ ಆಯೋಗ ಸ್ಥಾಪನೆಯಾಗಿದ್ದು 1950ರ ಜನವರಿ 25ರಂದು. ಹೀಗಾಗಿ ರಾಷ್ಟ್ರಾದ್ಯಂತ ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಂತ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗುತ್ತಿದೆ. ವಿದ್ಯಾವಂತರು ಹೆಚ್ಚಿರುವ ನಗರ ಪ್ರದೇಶದಲ್ಲಿ ಮತದಾನವನ್ನು ನಿರ್ಲಕ್ಷ್ಯಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಮತದಾನ ಜವಾಬ್ದಾರಿಯ ಅರಿವಿದ್ದೂ ದೂರ ಉಳಿಯುವ ವಿದ್ಯಾವಂತರಿಗೆ ಹಾಗೂ ಅರಿವಿಲ್ಲದೆ ದೂರ ಉಳಿಯುವ ಅವಿದ್ಯಾವಂತರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವುದು, 18 ವರ್ಷ ಮೇಲ್ಪಟ್ಟ ಎಲ್ಲ ಪ್ರಜೆಗಳೂ ಚುನಾವಣಾ ಸಂದರ್ಭದಲ್ಲಿ ಖಡ್ಡಾಯವಾಗಿ ಮತದಾನ ಮಾಡಬೇಕೆಂಬ ಸಂದೇಶ ಸಾರುವುದಕ್ಕಾಗಿ ಹಾಗೂ ಅವರಲ್ಲಿ ಮತದಾನದ ಹಕ್ಕು ಪಡೆಯುವಂತೆ ಸ್ಫೂರ್ತಿ ನೀಡುವುದು, ಆ ಹಕ್ಕಿನ ಕುರಿತು ಜಾಗೃತಿ ಮೂಡಿಸುವುದು ರಾಷ್ಟ್ರೀಯ ಮತದಾರರ ದಿನದ ಉದ್ದೇಶವಾಗಿದೆ.