ಭೂಮಿ ಮತ್ತು ವಸತಿ ಸಮಸ್ಯೆ : ಪರಿಹಾರಕ್ಕೆ ಆಗ್ರಹಿಸಿ ಮಡಿಕೇರಿಯಲ್ಲಿ ಪ್ರತಿಭಟನೆ

January 25, 2021

ಮಡಿಕೇರಿ ಜ.25 : ಕೊಡಗಿನ ಬಡ ವರ್ಗ ಅನುಭವಿಸುತ್ತಿರುವ ಭೂಮಿ ಮತ್ತು ವಸತಿ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಹಾಗೂ ಕಡು ಬಡವರಿಗೆ ನಿವೇಶನದ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನಗರದಲ್ಲಿ `ಬಡವರ ಪೆರೇಡ್’ ಘೋಷವಾಕ್ಯದೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿತು.
ಎ.ವಿ ಶಾಲೆ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಾಗಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಅಧ್ಯಕ್ಷ ಅಮೀನ್ ಮೊಹಿಸಿನ್ ಕೊಡಗಿನ ಆದಿವಾಸಿಗಳು, ಹಿಂದುಳಿದ ವರ್ಗ ಹಾಗೂ ಕಡುಬಡ ಕುಟುಂಬಗಳು ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಸ್ವಂತ ನೆಲೆಯನ್ನೂ ಹೊಂದಿಲ್ಲ. ಇದಕ್ಕೆ ನೇರ ಸರ್ಕಾರದ ನಿರ್ಲಕ್ಷ್ಯವೇ ಪ್ರಮುಖ ಕಾರಣವೆಂದು ಆರೋಪಿಸಿದರು.
ಬಿಜೆಪಿ ನೇತೃತ್ವದ ಸರ್ಕಾರ ಪ್ರತಿ ಹಂತದಲ್ಲಿ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಜ.26 ರಂದು ಬೆಂಗಳೂರಿನಲ್ಲಿ ಸರ್ಕಾರದ ವಿರುದ್ಧ ನಡೆಯುವÀ ಜಾಥದಲ್ಲಿ ನಮ್ಮ ಸಂಘಟನೆಯೂ ಪಾಲ್ಗೊಳ್ಳಲಿದೆ ಎಂದು ತಿಳಿಸಿದರು.
ಮಾರ್ಚ್ ತಿಂಗಳಿನಲ್ಲಿ “ಮಡಿಕೇರಿ ಚಲೋ” ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಲಿದೆ. ಕೃಷಿ ಕಾಯ್ದೆಯನ್ನು ಸರ್ಕಾರ ಹಿಂಪಡೆಯುವವರೆಗೆ ಮತ್ತು ಬಡವರಿಗೆ ನಿವೇಶನದ ಹಕ್ಕುಪತ್ರ ಸಿಗುವಲ್ಲಿಯವರೆಗೆ ಹೋರಾಟ ಮುಂದುವರೆಯಲಿದೆ ಎಂದರು.
2016 ರಿಂದಲೇ ನಿವೇಶನ ಮತ್ತು ವಸತಿಗಾಗಿ ಒತ್ತಾಯಿಸಿ ಬಡವರ ಪರವಾಗಿ ಪ್ರತಿಭಟನೆ ನಡೆಸುತ್ತಲೇ ಬರಲಾಗಿದೆ. ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಆರೋಪಿಸಿದರು. ನಿವೇಶನ ಮತ್ತು ವಸತಿ ಬೇಡಿಕೆ ಶೀಘ್ರ ಈಡೇರದಿದ್ದಲ್ಲಿ ದೆಹಲಿ ಮಾದರಿಯಲ್ಲಿ ಕೊಡಗಿನಲ್ಲೂ ಅಹೋರಾತ್ರಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅಮೀನ್ ಮೊಹಿಸಿನ್ ತಿಳಿಸಿದರು.
ಪ್ರಗತಿಪರ ಜನಾಂದೋಲನ ವೇದಿಕೆಯ ಪ್ರಧಾನ ಸಂಚಾಲಕ ವಿ.ಪಿ.ಶಶಿಧರ್ ಮಾತನಾಡಿ, ಜಿಲ್ಲೆಯಯಲ್ಲಿ 94ಸಿ, 94ಸಿಸಿಯಡಿಯಲ್ಲಿ ಮತ್ತು 50, 53 ಹಾಗೂ 57ರಲ್ಲಿ ಸಲ್ಲಿಸಿರುವ ಅರ್ಜಿಯನ್ನು ಜಿಲ್ಲಾಡಳಿತ ಪರಿಗಣಿಸಿ ನೈಜ ಫಲಾನುಭವಿಗಳಿಗೆ ವಸತಿ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿದರು.
ವಸತಿ ಹಕ್ಕು ಹೋರಾಟ ಸಮಿತಿಯ ಪ್ರಮುಖ ನಿರ್ವಾಣಪ್ಪ ಮಾತನಾಡಿ, ಜಿಲ್ಲೆಯಲ್ಲಿ 5 ಎಕರೆಗಿಂತ ಹೆಚ್ಚಿನ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿದಲ್ಲಿ ಅದನ್ನು ಸರ್ಕಾರ ತಕ್ಷಣ ಮುಟ್ಟುಗೋಲು ಹಾಕಿಕೊಂಡು ಬಡವರಿಗೆ ಹಂಚಿಕೆ ಮಾಡಬೇಕೆಂದರು.
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯ ಪ್ರಮುಖರಾದ ಕೆ.ಮೊಣ್ಣಪ್ಪ, ಹೇಮಂತ್ ಕುಮಾರ್, ಮನ್ಸೂರ್ ಆಲಿ, ಕೆ.ಬಿ.ರಾಜು, ಜಯಪ್ಪ, ಅನಿತಾ, ರೆಜಿತ್ ಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!