ಫೆ.6 ರಂದು ಕೊಡಗು ಜಿಲ್ಲೆಗೆ ರಾಷ್ಟ್ರಪತಿ ಭೇಟಿ : ಅಗತ್ಯ ಸಿದ್ಧತೆ ಕುರಿತು ಪೂರ್ವಭಾವಿ ಸಭೆ

January 25, 2021

ಮಡಿಕೇರಿ ಜ.25 : ಇದೇ ಫೆ.6 ರಂದು ಮಾನ್ಯ ಘನವೆತ್ತ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಫೆ.6 ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರಪತಿಗಳು ಪವಿತ್ರ ಪುಣ್ಯಕ್ಷೇತ್ರ ತಲಕಾವೇರಿ ದೇವಾಲಯಕ್ಕೆ ಭೇಟಿ ನೀಡಲಿದ್ದು, ತಲಕಾವೇರಿ ದೇವಾಲಯದ ಇತಿಹಾಸ, ವಿಶೇಷತೆ ಬಗ್ಗೆ ಮಾಹಿತಿ ನೀಡಬೇಕು. ಹೆಲಿಪ್ಯಾಡ್ ನಿರ್ಮಾಣ, ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳುವುದು. ದೇವಾಲಯದಲ್ಲಿ ರಾಷ್ಟ್ರಪತಿ ಅವರ ಕಚೇರಿಯಿಂದ ಬಂದಿರುವ ನಿಯಮಗಳನ್ನು ಚಾಚು ತಪ್ಪದೇ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಜನರಲ್ ತಿಮ್ಮಯ್ಯ ಸ್ಮಾರಕ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದು, ಅಗತ್ಯ ಪೊಲೀಸ್ ಭದ್ರತೆ ವ್ಯವಸ್ಥೆ ಕೈಗೊಂಡು ಶಿಷ್ಟಾಚಾರದಂತೆ ನಡೆದುಕೊಳ್ಳಬೇಕೆಂದು ಸೂಚನೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳುವುದು ಕೋವಿಡ್ ನಿಯಮ ಪಾಲಿಸುವಂತೆ ನಿರ್ದೇಶನ ನೀಡುವುದು, ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆಯುವುದು. ಆರ್‍ಟಿಒ ಅವರು ಅಗತ್ಯ ವಾಹನವನ್ನು ಒದಗಿಸುವಂತೆ ಚಾರುಲತ ಸೋಮಲ್ ಅವರು ನಿರ್ದೇಶನ ನೀಡಿದರು.
ಫೆ.4 ಮತ್ತು 5 ರಂದು ಡ್ರೈರನ್(ಪೂರ್ವ ತಯಾರಿ ಬಗ್ಗೆ ಪರಿಶೀಲನೆ) ಮಾಡಲಾಗುವುದು. ಅಗ್ನಿಶಾಮಕ ಇಲಾಖೆಯವರು ಹೆಲಿಪ್ಯಾಡ್ ಸ್ಥಳದಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದು. ಜನರಲ್ ತಿಮ್ಮಯ್ಯ ಸ್ಮಾರಕ ಬಳಿ ಪೆಟ್ರೋಲ್ ಬಂಕ್ ಇರುವುದರಿಂದ ನಿಯಮಾನುಸಾರ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಆಹಾರ ಸುರಕ್ಷತೆ ಗಮನಹರಿಸುವುದು. ರಸ್ತೆ ಸರಿಪಡಿಸುವುದು. ಶಿಷ್ಟಾಚಾರದ ವ್ಯವಸ್ಥೆಯನ್ನು ಉಪ ವಿಭಾಗಾಧಿಕಾರಿಯವರು ನೋಡಿಕೊಳ್ಳುವುದು, ಭಾರತೀಯ ವಾಯು ಸೇನಾ ಅಧಿಕಾರಿಗಳಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವುದು. ಅಗ್ನಿಶಾಮಕ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು. ಗಣ್ಯವ್ಯಕ್ತಿಗಳು ಆಗಮಿಸುವ ಹಿನ್ನೆಲೆ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
::: ತಲಕಾವೇರಿಗೆ ಪ್ರವೇಶವಿಲ್ಲ :::
‘ಫೆ.6 ರಂದು ರಾಷ್ಟ್ರಪತಿ ಅವರು ತಲಕಾವೇರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಫೆ.5 ಮತ್ತು 6 ರಂದು ತಲಕಾವೇರಿ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಮನವಿ ಮಾಡಿದರು.’
ಸಭೆಯಲ್ಲಿ ವಿವಿಧ ಉಪ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಯಿತು. ವಿವಿಧ ಉಪ ಸಮಿತಿಗಳು ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಶಿಷ್ಟಾಚಾರದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಯಾವುದೇ ನ್ಯೂನತೆಗಳು ಕಂಡುಬರದಂತೆ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಡಿವೈಎಸ್‍ಪಿ ದಿನೇಶ್ ಕುಮಾರ್ ಅವರು ರಾಷ್ಟ್ರಪತಿ ಆಗಮನ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಮಾಡಿಕೊಳ್ಳಲಾಗುತ್ತದೆ. ಫೆ.6 ರಂದು ಕಾರ್ಯಕ್ರಮ ಆರಂಭವಾಗುವುದಕ್ಕೂ ಮೊದಲು ಒಂದು ಗಂಟೆಗೆ ಮುಂಚಿತವಾಗಿ ವಾಹನ ಸಂಚಾರದ ಮಾರ್ಗವನ್ನು ಬದಲಾಯಿಸಬೇಕಿದೆ ಎಂದರು.
ವಾರ್ತಾಧಿಕಾರಿ ಚಿನ್ನಸ್ವಾಮಿ ರಾಷ್ಟ್ರಪತಿಯವರು ಆಗಮಿಸುತ್ತಿರುವ ಹಿನ್ನೆಲೆ ಪತ್ರಕರ್ತರು ವರದಿ ಮಾಡಲು ಅನುಕೂಲವಾಗುವಂತೆ ಅವಕಾಶ ನೀಡಬೇಕು. ಅಗತ್ಯ ಪಾಸ್ ಒದಗಿಸಬೇಕು ಎಂದು ಕೋರಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪ, ಪೊಲೀಸ್ ಇನ್ಸ್‍ಪೆಕ್ಟರ್ ಮೇದಪ್ಪ, ಪಿಡಬ್ಲ್ಯುಡಿ ಇಲಾಖೆ ಎಇಇ ಶಿವರಾಮ್, ನಗರಾಭಿವೃದ್ಧಿ ಯೋಜನಾ ಕೋಶದ ರಾಜು, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ, ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಬಿಂದುಶ್ರೀ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಕೊಡಗು ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಕಾರ್ಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್, ಆಹಾರ ಇಲಾಖೆ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ. ದರ್ಶನ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್, ಪೌರಾಯುಕ್ತರಾದ ಎಸ್.ವಿ.ರಾಮದಾಸ್, ತಾ.ಪಂ.ಇಒ ಲಕ್ಷ್ಮೀ, ತಹಶೀಲ್ದಾರ್ ಮಹೇಶ್ ಅವರು ಹಲವು ಮಾಹಿತಿ ನೀಡಿದರು.

error: Content is protected !!