ಮಡಿಕೇರಿಯಲ್ಲಿ ಗಣರಾಜ್ಯೋತ್ಸವ : ಗಣರಾಜ್ಯದ ಪರಿಕಲ್ಪನೆಯೊಂದಿಗೆ ಅಭಿವೃದ್ಧಿಗೆ ಕೈಜೋಡಿಸಿ : ಸಚಿವ ವಿ.ಸೋಮಣ್ಣ ಕರೆ

January 26, 2021

ಮಡಿಕೇರಿ ಜ.26 : ಸ್ವಾತಂತ್ರ್ಯ, ಸಮಾನತೆ, ಸೋದರತ್ವಗಳ ಅಡಿಗಲ್ಲಿನ ಮೇಲೆ ನಿಂತಿರುವ ಪ್ರಜಾಸತ್ತಾತ್ಮಕ ಗಣರಾಜ್ಯದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಪ್ರತಿಯೊಬ್ಬರೂ ನಾಡಿನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ವಿ.ಸೋಮಣ್ಣ ಕರೆ ನೀಡಿದ್ದಾರೆ.
ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡಿದ ಅವರು, ಕೊಡಗಿನ ಸರ್ವತೋಮಖ ಅಭಿವೃದ್ಧಿಯ ಜೊತೆಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರ ಕಟಿಬದ್ಧವಾಗಿದೆ ಎಂದರು. ಗಣತಂತ್ರ ವ್ಯವಸ್ಥೆಯಲ್ಲಿ 71 ವಸಂತಗಳನ್ನು ಕಳೆದಿರುವ ಈ ಸುದೀರ್ಘ ಅವಧಿಯಲ್ಲಿ ದೇಶ ಹಲವಾರು ಬದಲಾವಣೆಗಳನ್ನು ಕಂಡಿದೆ. ಎದುರಾದ ಸಮಸ್ಯೆ, ಸವಾಲುಗಳನ್ನು ದಕ್ಷತೆಯಿಂದ ಎದುರಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನ ದಿಟ್ಟತನವನ್ನು ಮೆರದಿದೆ ಎಂದು ಹೇಳಿದರು.
ಭಾರತವು ವಿಶ್ವದ ಭೂಪಟದಲ್ಲಿ ವಿವಿಧ ಭಾಷೆ, ಧರ್ಮ, ಸಂಸ್ಕøತಿ, ಪ್ರಾಂತ್ಯಗಳಿಂದ ಒಗ್ಗೂಡಿ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಏಕೈಕ ರಾಷ್ಟ್ರವಾಗಿದ್ದು, ನೆಲ, ಜಲ. ಗಡಿ, ಭಾಷೆ ಇತ್ಯಾದಿ ವಿಷಯಗಳಲ್ಲಿ ಉಂಟಾಗುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡು ದೇಶ ಬಲಿಷ್ಠ ಹಾಗೂ ಸ್ವಾಭಿಮಾನ ರಾಅಷ್ಟ್ರವಾಗಿ ಬೆಳೆದಿದೆ ಎಂದು ಸಚಿವರು ನುಡಿದರು.
ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ಒಂದೂವರೆ ವರ್ಷಗಳನ್ನು ಪೂರೈಸಿದ್ದು, ಈ ಅವಧಿಯಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಧ್ಯೇಯದಲ್ಲಿ ಜನತೆಯ ಆಶಯದಂತೆ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ ಎಂದು ಹೇಳಿದ ಸಚಿವರು, ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪದಿಂದ ನಲುಗಿ ಹೋಗಿರುವ ಕೊಡಗು ಜಿಲ್ಲೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಾಣ, ಮಳೆಹಾನಿ-ಬೆಳೆಹಾನಿ ಪರಿಹಾರ, ರಸ್ತೆ, ಸೇತುವೆ, ತಡೆಗೋಡೆ ಇತ್ಯಾದಿ ಮೂಲ ಸೌಲಭ್ಯಗಳ ಪುನರ್‍ನಿರ್ಮಾಣ ಸೇರಿದಂತೆ ಹತ್ತುಹಲವು ಕಾರ್ಯಕ್ರಮಗಳ ಮೂಲಕ ಸಂತ್ರಸ್ತರ ಬದುಕನ್ನು ಕಟ್ಟಿಕೊಡಲು ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ತಿಳಿಸಿದರು.
498 ಮನೆಗಳ ಹಸ್ತಾಂತರ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಈಗಾಗಲೇ 498 ಮನೆಗಳನ್ನು ಹಸ್ತಾಂತರಿಸಲಾಗಿದ್ದು, ಬಿಳಿಗೇರಿಯಲ್ಲಿ 22 ಮನೆಗಳ ಹಸ್ತಾಂತರಕ್ಕೆ ಸಿದ್ಧವಾಗಿವೆ. ಗಾಳಿಬೀಡು ಗ್ರಾಮದಲ್ಲಿ 140 ಹಾಗೂ ಕೆ.ನಿಡುಗಣೆ ಗ್ರಾಮದಲ್ಲಿ 75 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದ್ದು, ಶೀಘ್ರವೇ ಈ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ಸಚಿವ ಸೋಮಣ್ಣ ನುಡಿದರು.
ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಇಲಾಖಾ ವತಿಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾಮಗಾರಿ ಕೈಗೊಳ್ಳಲು 45 ಕೋಟಿ ರೂ.ಗಳಿಗೆ ಅನುಮೋದನೆ ನೀಡಿದ್ದು, ಈಗಾಗಲೇ 10.66 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಎಲ್ಲಾ ಮನೆಗಳಿಗೆ ನಲ್ಲಿ ನೀರು: ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಸತಿರಹಿತ ಖಾಯಂ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶವನ್ನು ಸರಕಾರ ಹೊಂದಿರುವುದಾಗಿ ತಿಳಿಸಿದ ಸಚಿವ ಸೋಮಣ್ಣ, ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ 2024ರೊಳಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದ್ದು, 2020-21ನೇ ಸಾಲಿಗೆ ಜಿಲ್ಲೆಗೆ 112.25 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.
ಸಮಾರಂಭದಲ್ಲಿ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಸಂಸದ ಪ್ರತಾಪ್‍ಸಿಂಹ, ಕರ್ನಾಟಕ ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಎಸ್.ರವಿಕುಶಾಲಪ್ಪ, ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಸಮಾರಂಭಕ್ಕೂ ಮುನ್ನ ಸಶಸ್ತ್ರ ಪಡೆ, ಪೊಲೀಸ್, ಗೃಹರಕ್ಷಕ ದಳ, ಎನ್‍ಸಿಸಿ ಹಾಗೂ ಅರಣ್ಯ ಇಲಾಖೆ ತಂಡಗಳ ಪಥ ವೀಕ್ಷಣೆ ನಡೆಸಿದ ಸಚಿವರು ವಂದನೆ ಸ್ವೀಕರಿಸಿದರು. ಬಳಿಕ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
::: ವಿದ್ಯಾರ್ಥಿನಿಗೆ 1 ಲಕ್ಷ ಪ್ರೋತ್ಸಾಹಧನ :::
ಸಮಾರಂಭದ ಬಳಿಕ ರಾಷ್ಟ್ರಪತಿ ಪದಕ ಪುರಸ್ಕøತ ಮಹಿಳಾ ಪೊಲೀಸ್ ಸಿಬ್ಬಂದಿ ಎಂ.ಬಿ.ಸುಮತಿ, ಅಂತರರಾಷ್ಟ್ರೀಯ ಮಟ್ಟದ ಹಿರಿಯ ಅಥ್ಲೆಟ್ ಪೆಮ್ಮಂಡ ಎಂ.ಅಪ್ಪಯ್ಯ ಅವರನ್ನು ಸನ್ಮಾನಿಸಲಾಯಿತು. ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿಹೆಚ್ಚು (625ರಲ್ಲಿ 614) ಅಂಕ ಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿ ಟಿ.ಸಿಂಚನಾ ಅವರಿಗೆ ಒಂದು ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ಲಹರಿ ಶಿಕ್ಷಕರ ಕಲಾ ಬಳಗದ ಸದಸ್ಯರು ನಾಡಗೀತೆ ಹಾಗೂ ರೈತಗೀತೆ ಹಾಡಿದರು.

error: Content is protected !!