ಪಂಜಾಬ್, ಹರಿಯಾಣ ರೈತರು ಮಾತ್ರ ವಿರೋಧಿಸುತ್ತಿದ್ದಾರೆ : ಸಚಿವ ವಿ.ಸೋಮಣ್ಣ ಸಮರ್ಥನೆ

January 26, 2021

ಮಡಿಕೇರಿ ಜ.26 : ಕೇಂದ್ರ ಸರಕಾರ ತಿದ್ದುಪಡಿ ಮಾಡಿರುವ ಕೃಷಿ ಮಸೂದೆಗೆ ಪಂಜಾಬ್ ಮತ್ತು ಹರಿಯಾಣ ರಾಜ್ಯದ ರೈತರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ದೇಶದ ಇತರ ಭಾಗಗಳಲ್ಲಿ ವಿರೋಧ ಕಂಡಬರುತ್ತಿಲ್ಲವೆಂದು ವಸತಿ ಹಾಗೂ ಕೊಡಗು ಉಸ್ತುವಾರಿ ಸಚಿವ ವಿ.ಸೋಮಣ್ಣ ಸಮರ್ಥಿಸಿಕೊಂಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರತಿಭಟಿಸುವುದು ಪ್ರತಿಯೊಬ್ಬರ ಹಕ್ಕಾಗಿದ್ದು, ಅದರಂತೆ ರೈತರೂ ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಂದಿನ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗಲೇ ಕೃಷಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿತ್ತಾದರೂ, ಬಳಿಕ ಅದನ್ನು ಮುಚ್ಚಟ್ಟಿತ್ತು ಎಂದು ಟೀಕಿಸಿದರು. ಇದೀಗ ಪ್ರತಿಭಟನಾ ನಿರತರಾಗಿರುವ ರೈತರೊಂದಿಗೆ ಮಾತುಕತೆ ನಡೆಸುವ ಮೂಲಕ ಸರಕಾರ ಈ ಸಮಸ್ಯೆಯನ್ನು ಪರಿಹರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
::: ಸಂಪುಟ ಗೊಂದಲ ಸುಖಾಂತ್ಯ :::
ಸಚಿವ ಸಂಪುಟದಲ್ಲಿನ ಖಾತೆಗಳ ಹಂಚಿಕೆ ಹಾಗೂ ಬದಲಾವಣೆ ಮಾಡುವ ಪರಮಾಧಿಕಾರ ಮುಖ್ಯಮಂತ್ರಿಗಳದ್ದಾಗಿದ್ದು, ರಾಜ್ಯದಲ್ಲಿನ ಖಾತೆಹಂಚಿಕೆ ಸಂಬಂಧದ ಗೊಂದಲುಗಳು ಸುಖಾಂತ್ಯ ಕಂಡಿವೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ನುಡಿದರು.
ಸಚಿವ ಸಂಪುಟದಲ್ಲಿನ ವಿವಿಧ ಖಾತೆಗಳನ್ನು ಮುಖ್ಯಮಂತ್ರಿಗಳು ತಮ್ಮ ಅನುಭವದ ಮೇಲೆ ಹಂಚಿಕೆ ಮಾಡಿದ್ದು, ಖಾತೆ ಹಂಚಿಕೆ ಹಾಗೂ ಬದಲಾವಣೆ ಮಾಡುವುದು ಅವರ ಪರಮಾಧಿಕಾರವಾಗಿದೆ. ಈ ಸಂದರ್ಭ ಕೆಲವರು ತಮಗೆ ದೊರೆತ ಖಾತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರಾದರೂ, ಇದೀಗ ಆ ಗೊಂದಲಗಳಿಗೆ ತೆರೆ ಎಳೆಯಲಾಗಿದ್ದು, ಇದೀಗ ಎಲ್ಲವೂ ಮುಗಿದ ಅಧ್ಯಾಯವಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರಮೋದಿ ಅವರ ಕಾರ್ಯ ವೈಖರಿ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸೋಮಣ್ಣ ಅವರು, ಕೊಡಗಿನಲ್ಲಿ ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೊಳ್ಳುತ್ತಿರುವುದು ದೇಶಕ್ಕಾಗಿ ಹುತಾತ್ಮರಾದ ಕೊಡಗಿನ ವೀರಯೋಧರಿಗೆ ನೀಡುತ್ತಿರುವ ಗೌರವವಾಗಿದೆ. ಕೊಡಗಿನ ಗೌರವಕ್ಕೆ ಮತ್ತಷ್ಟು ಶಕ್ತಿ ತುಂಬುವ ಕಾರ್ಯವನ್ನು ಸರಕಾರ ಮಾಡಲಿದೆ ಎಂದು ಹೇಳಿದರು.

error: Content is protected !!