ಸೋಮವಾರಪೇಟೆಯಲ್ಲಿ ಗಣರಾಜ್ಯೋತ್ಸವ : ಸಂವಿಧಾನವನ್ನು ಬಲಪಡಿಸಲು ಕರೆ

January 26, 2021

ಸೋಮವಾರಪೇಟೆ ಜ.26 : ಪ್ರಪಂಚದ ಶ್ರೇಷ್ಠ ಸಂವಿಧಾನಗಳಲ್ಲಿ ಭಾರತದ ಸಂವಿಧಾನವೂ ಒಂದಾಗಿದೆ. ದೇಶದ ನಾಗರೀಕರಾದ ನಾವೆಲ್ಲರೂ ಒಂದಾಗಿ ಸಂವಿಧಾನವನ್ನು ಬಲಪಡಿಸುವ ಸಂಕಲ್ಪ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷÀ ಎಂ.ಬಿ.ಅಭಿಮನ್ಯುಕುಮಾರ್ ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ 72ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾವೈಕ್ಯತೆ, ಸೌಹಾರ್ದತೆ, ಶಾಂತಿ, ಸಮಾನತೆ, ಸಹಿಷ್ಣುತೆ ನಮ್ಮ ಸಂವಿಧಾನದ ಜೀವಾಳವಾಗಿದೆ. ಪ್ರಪಂಚದ ಎಲ್ಲಾ ಧರ್ಮಗ್ರಂಥಗಳಿಗಿಂತ ಶ್ರೇಷ್ಠ ಸಂವಿಧಾನ ನಮ್ಮದು.ಅದರಂತೆ ಮೂಲಭೂತ ಹಕ್ಕುಗಳನ್ನು ಪಡೆಯುವುದರೊಂದಿಗೆ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸಿ ಪ್ರಧಾನಿ ನರೇಂದ್ರ ಮೋದಿಯವರ ಕನಸ್ಸಿನ ವಿಶ್ವಗುರು ಪಟ್ಟವನ್ನು ಪಡೆಯಬೇಕು ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಗೋವಿಂದರಾಜು ಅವರು ಸಂದೇಶ ನೀಡಿ, ದೇಶದ ಪ್ರಜೆಯಾಗಿರುವುದಕ್ಕೆ ನಾವೆಲ್ಲ ಹೆಮ್ಮೆ ಪಡಬೇಕು. ಸಂವಿಧಾನ ಜಾರಿಗೆ ಬಂದ ನಂತರ ಮೂಲಭೂತ ಹಕ್ಕುಗಳು ಸಿಕ್ಕಿವೆ. ಬಲಿಷ್ಠ ಭಾರತವನ್ನು ಕಟ್ಟಲು ನಮ್ಮನ್ನು ಮುಡಿಪಾಗಿಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಾಜಿ ಸೈನಿಕರಾದ ಕಿಬ್ಬೆಟ್ಟ ಗ್ರಾಮದ ಎಂ.ಸಿ.ಪೂವಯ್ಯ, ಸರ್ಕಾರಿ ಆಸ್ಪತ್ರೆಯ ಶವಪರೀಕ್ಷಾ ಸಹಾಯಕರಾದ ಎಚ್.ಸಿ.ಮಂಜುನಾಥ್, ಜೀಪು ಚಾಲಕರು ಹಾಗು ಪ್ರತಿಫಲಾಪೇಕ್ಷೆಯಿಲ್ಲದೆ ಬಡವರ ಮೃತದೇಹಗಳನ್ನು ಸಾಗಿಸುವ ವೃತ್ತಿಯಲ್ಲಿರುವ ವಿ.ಕೆ.ಮಂಜುನಾಥ್, ಪಟ್ಟಣ ಪಂಚಾಯಿತಿ ಪೌರಕಾರ್ಮಿಕ ವೀರೇಶ್ ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಳಿನಿಗಣೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ತಾಲೂಕು ಪಂಚಾಯಿತಿ ಸದಸ್ಯೆ ಎಚ್.ಎನ್.ತಂಗಮ್ಮ, ಸಮಿತಿಯ ಸದಸ್ಯರಾದ ಎಸ್.ಮಹೇಶ್, ಜೆ.ಸಿ.ಶೇಖರ್,ಎಸ್.ಡಿ.ವಿಜೇತ್, ತಾಪಂ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಬಿ.ಇ.ಒ.ಪಾಂಡು, ಪಾಂಶುಪಾಲರಾದ ಬೆಳ್ಳಿಯಪ್ಪ, ಪಪಂ ಮುಖ್ಯಾಧಿಕಾರಿ ನಾಚಪ್ಪ, ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು ಮತ್ತಿತರರು ಇದ್ದರು. ಪೊಲೀಸ್ ಇಲಾಖೆಯಿಂದ ಧ್ವಜಾವಂದನೆ ನಡೆಯಿತು. ಶಿಕ್ಷಕರಾದ ಕವಿತ ತಂಡದಿಂದ ರಾಷ್ಟ್ರಗೀತೆ, ಜಾಕ್ಲಿನ್ ತಂಡದಿಂದ ನಾಡಗೀತೆ ಹಾಗು ಶೇಖರ್ ತಂಡದವರು ರೈತಗೀತೆ ಹಾಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕರಾದ ಡಾ.ಸದಾಶಿವಯ್ಯ ಪಲ್ಲೇದ್ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆ ಹಾಗು ನೃತ್ಯ ಕಾರ್ಯಕ್ರಮ ನಡೆಯಿತು.

error: Content is protected !!