ಬುಡಕಟ್ಟು ಜನಾಂಗವೆಂದು ಘೋಷಿಸಲು ಒತ್ತಾಯ : ಸಿಎನ್‍ಸಿ ಯಿಂದ ಧರಣಿ ಸತ್ಯಾಗ್ರಹ

26/01/2021

ಮಡಿಕೇರಿ ಜ.26 : ಕೊಡವರನ್ನು ಬುಡಕಟ್ಟು ಜನಾಂಗವೆಂದು ಘೋಷಿಸುವ ಮೂಲಕ ರಾಜ್ಯಾಂಗ ಭದ್ರತೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಗಣರಾಜ್ಯೋತ್ಸವದ ದಿನವಾದ ಇಂದು ಧರಣಿ ಸತ್ಯಾಗ್ರಹ ನಡೆಸಿತು.
ನಗರದ ಜ್ಯೂನಿಯರ್ ಕಾಲೇಜು ಮೈದಾನದ ಸಮೀಪದ ಕೊಡವ ಮಂದ್‍ನಲ್ಲಿ ಧರಣಿ ನಡೆಸಿದ ಸಿಎನ್‍ಸಿ ಪ್ರಮುಖರು ಅತ್ಯಂತ ಸೂಕ್ಷ್ಮ ಜನಾಂಗವಾಗಿರುವ ಕೊಡವರ ಬೇಡಿಕೆ ಈಡೇರದ ಹೊರತು ಗಣರಾಜ್ಯೋತ್ಸವ ಪರಿಪೂರ್ಣವಾಗುವುದಿಲ್ಲವೆಂದು ಅಭಿಪ್ರಾಯಪಟ್ಟರು.
ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕು ಮತ್ತು ಕೊಡವ ಲ್ಯಾಂಡ್ ಹಕ್ಕೊತ್ತಾಯದ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು. ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ‘ಎಸ್.ಟಿ.’ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕೆಂದ ಅವರು ಕೊಡವರ ಈ ಪ್ರಧಾನ ಹಕ್ಕೊತ್ತಾಯಕ್ಕೆ ಸಂಬಂಧಿಸಿದಂತೆ ಕುಲಶಾಸ್ತ್ರ ಅಧ್ಯಯನ ಅಂತಿಮ ಘಟ್ಟದಲ್ಲಿದೆ. ಬುಡಕಟ್ಟು ಜನರ ಸ್ಥಾನಮಾನಗಳನ್ನು ಒದಗಿಸಿಕೊಡಲು ಸಾಂವಿಧಾನಿಕ ಪ್ರಕ್ರಿಯೆ ನಡೆಯಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸುವ ಉದ್ದೇಶದಿಂದ ಧರಣಿ ನಡೆಸಲಾಗುತ್ತಿದೆ ಎಂದರು.
ಕೊಡವರು ಬುಡಕಟ್ಟು ಎಸ್.ಟಿ. ಪಟ್ಟಿಯಲ್ಲಿ ಸೇರ್ಪಡೆ ಗೊಳ್ಳುವುದು ರಾಜ್ಯಾಂಗದತ್ತ ಹಕ್ಕಾಗಿದೆ. ಅದನ್ನು ಯಾರಿಂದಲೂ ನಿರಾಕರಿಸಲು, ವಿರೋಧಿಸಲು ಸಾಧ್ಯವಿಲ್ಲ. ಕೊಡವರಿಗೆ ಸಂವಿಧಾನ ಬದ್ಧವಾಗಿ ಎಸ್‍ಟಿ ಟ್ಯಾಗ್ ನೀಡಬೇಕೆನ್ನುವ ಹಕ್ಕೊತ್ತಾಯವನ್ನು ಮಂಡಿಸಲಾಗುತ್ತಿದೆ ಎಂದು ತಿಳಿಸಿದರು. ಬೇಡಿಕೆ ಈಡೇರುವಲ್ಲಿಯವರೆಗೆ ಶಾಂತಿಯುತ ಹೋರಾಟ ಮುಂದುವರೆಯಲಿದೆ ಎಂದು ನಾಚಪ್ಪ ಸ್ಪಷ್ಟಪಡಿಸಿದರು.
ಪೊಲೀಸ್ ಅಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅವರು ಮನವಿ ಸಲ್ಲಿಸಿದರು. ಸಿಎನ್‍ಸಿ ಪ್ರಮುಖರು ಈ ಸಂದರ್ಭ ಹಾಜರಿದ್ದರು.