ಕರಿಕೆಯಲ್ಲಿ ಕಾಂಗ್ರೆಸ್ ವಿಜಯೋತ್ಸವ : ಪಕ್ಷ ಸಂಘಟನೆಗೆ ಯು.ಟಿ.ಖಾದರ್ ಕರೆ

January 26, 2021

ಮಡಿಕೇರಿ ಜ.26 : ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳಿಂದ ಬೇಸತ್ತಿರುವ ಜನರು ಕಾಂಗ್ರೆಸ್ ಆಡಳಿತ ಮತ್ತೆ ಅಸ್ತಿತ್ವಕ್ಕೆ ಬರಬೇಕೆನ್ನುವ ನಿರೀಕ್ಷೆಯಲ್ಲಿದ್ದು, ಪಕ್ಷ ಸಂಘಟನೆ ಮತ್ತಷ್ಟು ಚುರುಕುಗೊಳ್ಳಬೇಕಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.
ಗ್ರಾ.ಪಂ ಚುನಾವಣೆಯಲ್ಲಿ ಕರಿಕೆ ಪಂಚಾಯ್ತಿಗೆ ಅಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದ ಹಿನ್ನೆಲೆ ಕರಿಕೆಯಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರಿಕೆ ಗ್ರಾಮದ ಕಾರ್ಯಕರ್ತರ ಉತ್ಸಾಹ ಇತರರಿಗೂ ಮಾದರಿಯಾಗಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಬಲ ಹೆಚ್ಚಿಸಲು ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಅವರು ಮಾತನಾಡಿ ಪಕ್ಷ ಸಂಘಟನೆಯ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ವಕ್ತಾರ ಎ.ಎಸ್.ಪೊನ್ನಣ್ಣ ಮಾತನಾಡಿ, ಜನಪರ ಕಾಳಜಿಯೊಂದಿಗೆ ಕಾರ್ಯಕರ್ತರು ಕಾರ್ಯ ನಿರ್ವಹಿಸಬೇಕಂದರು. ಪಕ್ಷ ಬಲವರ್ಧನೆಯ ಸಂದರ್ಭ ಕಾನೂನಾತ್ಮಕ ಸಹಕಾರ ನೀಡುವುದಾಗಿ ಹೇಳಿದರು.
ಹಿರಿಯ ಮುಖಂಡ ಹೆಚ್.ಎಸ್.ಚಂದ್ರಮೌಳಿ, ಕೆಪಿಸಿಸಿ ಫ್ಯಾನಲಿಸ್ಟ್ ಟಿ.ಪಿ.ರಮೇಶ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಮಾತನಾಡಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಟಿ.ಎಂ.ಶಾಹಿದ್, ಕರಿಕೆ ಕಾಂಗ್ರೆಸ್ ಪ್ರಮುಖ ಎನ್.ಬಾಲಚಂದ್ರ ನಾಯರ್ ಮತ್ತಿತರರು ಹಾಜರಿದ್ದರು.

error: Content is protected !!