ರೈತರ ಹೋರಾಟಕ್ಕೆ ಬೆಂಬಲ : ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ಮಡಿಕೇರಿಯಲ್ಲಿ ಪ್ರತಿಭಟನೆ

January 27, 2021

ಮಡಿಕೇರಿ ಜ.27 : ಕೇಂದ್ರ ಸರ್ಕಾರ ರೈತ ಹಾಗೂ ಜನವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿದೆಯೆಂದು ಆರೋಪಿಸಿ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ನಗರದ ಗಾಂಧಿ ಮಂಟಪದ ಎದುರು ಜನ ಜಾಗೃತಿ ಅಭಿಯಾನದಡಿ ಪ್ರತಿಭಟನೆ ನಡೆಸಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಜನವಿರೋಧಿ ನೀತಿಗಳ ವಿರುದ್ಧ ಜನ ಜಾಗೃತರಾಗಬೇಕೆಂದು ಕರೆ ನೀಡಿದರು.
ಸಂಘಟನೆಯ ಜಿಲ್ಲಾಧ್ಯಕ್ಷÀ ಕೆ.ಟಿ.ಬಷೀರ್ ಮಾತನಾಡಿ ಕೃಷಿ ಪ್ರಧಾನ ರಾಷ್ಟ್ರದ ಬೆನ್ನೆಲುಬಾಗಿರುವ ಕೃಷಿಕರ ಬೆನ್ನೆಲುಬನ್ನೇ ಮುರಿಯಲು ಆಳುವ ಸರ್ಕಾರಗಳು ಮುಂದಾಗಿವೆ ಎಂದು ಆರೋಪಿಸಿದರು. ಪ್ರಸ್ತುತ ಕೃಷಿ ಕ್ಷೇತ್ರ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ. ಬೆಳೆದ ಬೆಳೆಗಳಿಗೆ ಸೂಕ್ತ ದರ ಮತ್ತು ಮಾರುಕಟ್ಟೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಾವರಿ, ಬಿತ್ತನೆ ಬೀಜ, ರಸಗೊಬ್ಬರ , ವಿದ್ಯುತ್ ಪೂರೈಕೆ, ದಾಸ್ತಾನು ಕೊಠಡಿ, ಸಾಲ ಸೌಲಭ್ಯಗಳು ಸಮರ್ಪಕವಾಗಿ ದೊರಕದ ಕೃಷಿಕ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗುತ್ತಿದ್ದಾನೆ. ಹೀಗಿದ್ದೂ ಸರ್ಕಾರಗಳು ಸಮಸ್ಯೆ ಬಗೆಹರಿಕೆಯ ನಿಟ್ಟಿನ ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತಿವೆ ಎಂದು ಆರೋಪಿಸಿದರು.
ಕೇಂದ್ರ್ರ ಸರ್ಕಾರ ಜಾರಿ ಗೊಳಿಸಲು ಮುಂದಾಗಿರುವ ಮೂರು ಕೃಷಿ ಕಾಯ್ದೆಗಳು ರೈತ ಮತ್ತು ಜನ ವಿರೋಧಿಯಾಗಿವೆ. ಈ ಕಾಯ್ದೆಗಳು ಜಾರಿಯಾದರೆ ಕೃಷಿ ಕ್ಷೇತ್ರ ದಿವಾಳಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕುವ ಗಂಭೀರ ಅಪಾಯ ಎದುರಿಗಿದೆ ಎಂದು ಅಭಿಪ್ರಾಯಪಟ್ಟ ಅವರು, ರೈತರ ಹೋರಾಟಕ್ಕೆ ನಿರಂತರ ಬೆಂಬಲ ನೀಡುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ಸತೀಶ್, ಪ್ರಮುಖರಾದ ಜಿ.ಹೆಚ್. ಮೊಹಮ್ಮದ್ ಹನೀಫ್ ಸೇರಿದಂತೆ ಹಲ ಪ್ರಮುಖರು ಪಾಲ್ಗೊಂಡಿದ್ದರು.

error: Content is protected !!