ಕೃಷಿ ಕಾಯ್ದೆ ರದ್ದುಗೊಳಿಸಲು ಆಗ್ರಹ : ಮಡಿಕೇರಿಯಲ್ಲಿ ಸಿಐಟಿಯು ಪ್ರತಿಭಟನೆ

27/01/2021

ಮಡಿಕೇರಿ ಜ.27 : ಕೇಂದ್ರದ ಬಿಜೆಪಿ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿರುವ ತ್ರಿವಳಿ ಕೃಷಿ ಕಾಯ್ದೆಗಳನ್ನು ಮತ್ತು ಉದ್ದೇಶಿತ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಸಿಐಟಿಯು ಸಂಘಟನೆ ನಗರದ ಗಾಂಧಿ ಮಂಟಪದ ಎದುರು ಪ್ರತಿಭಟನೆ ನಡೆಯಿತು.
ಸಿಐಟಿಯು ಜಿಲ್ಲಾಧ್ಯಕ್ಷ ಮಹದೇವ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸದಸ್ಯರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.
ಕಾರ್ಮಿಕ ಮುಖಂಡರುಗಳು ಮಾತನಾಡಿ, ಕೇಂದ್ರದ ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆಯಿಂದ ದ್ವಿದಳ ಧಾನ್ಯಗಳು, ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳು, ಆಲೂಗಡ್ಡೆ, ಈರುಳ್ಳಿಯನ್ನು ಅಗತ್ಯ ಸರಕುಗಳ ಪಟ್ಟಿಯಿಂದ ತೆಗೆದು ಹಾಕಿದೆ. ಈ ವಸ್ತುಗಳನ್ನು ಇನ್ನು ಎಷ್ಟು ಬೇಕಾದರು ದಾಸ್ತಾನು ಮಾಡಬಹುದು ಮತ್ತು ಸಾಗಿಸಬಹುದು. ಇದರಿಂದ ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಿಕೊಂಡು ಬೆಲೆ ಏರಿಸಿ ಲೂಟಿ ಮಾಡಲು ದೊಡ್ಡ ದೊಡ್ಡ ಖರೀದಿದಾರರಿಗೆ, ವರ್ತಕರಿಗೆ ಅವಕಾಶ ಕಲ್ಪಿಸಿದಂತಾಗಿದೆಯೆಂದು ಆರೋಪಿಸಿದರು.
ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆಯನ್ನು ತರುವ ಮೂಲಕ ಇಡೀ ಚಿಲ್ಲರೆ ವ್ಯಾಪಾರಿಗಳ ಕ್ಷೇತ್ರವನ್ನು ಕಾರ್ಪೋರೇಟ್ ಕಂಪೆನಿಗಳಿಗೆ ವಹಿಸಿಕೊಡುವ ಪ್ರಯತ್ನ ನಡೆದಿದೆಯೆಂದು ಟೀಕಿಸಿ, 29 ಕಾರ್ಮಿಕ ಕಾನೂನುಗಳನ್ನು ರದ್ದುಮಾಡಿ, ಅಂಗೀಕರಿಸಿರುವ 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ವಿದ್ಯುತ್ ತಿದ್ದುಪಡಿ ಮಸೂದೆಯಿಂದ ವಿದ್ಯುತ್ ರಂಗದ ಎಲ್ಲಾ ವಲಯಗಳು ಸಂಪುರ್ಣ ಖಾಸಗೀಕರಣಗೊಳ್ಳುವುದರಿಂದ ರೈತರ ನೀರಾವರಿ ಪಂಪ್‍ಸೆಟ್‍ಗೆ ಉಚಿತ ವಿದ್ಯುತ್ ದೊರೆಯುವುದಿಲ್ಲ ಹಾಗೂ ಬಿಪಿಎಲ್ ಕುಟುಂಬಗಳ ಸಬ್ಸಿಡಿ. ಭಾಗ್ಯಜ್ಯೋತಿ, ಕುಟಿರ ಜ್ಯೋತಿ ಯೋಜನೆಗಳು ರದ್ದಾಗುವ ಆತಂಕವನ್ನು ಪ್ರತಿಭಟನಾಕಾರರು ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಾಬು, ಖಜಾಂಚಿ ರಮೇಶ್, ಉಪಾಧ್ಯಕ್ಷರಾದ ಪಿ.ಆರ್. ಭರತ್, ಕಾರ್ಮಿಕ ಮುಖಂಡರುಗಳಾದ ಡಾ. ಈ.ರ. ದುರ್ಗಾಪ್ರಸಾದ್, ಎನ್.ಡಿ. ಕುಟ್ಟಪ್ಪ, ರಾಜಪ್ಪಾಜಿ ಹಾಗೂ ಸಂಘಟನೆಯ ಸದಸ್ಯರುಗಳು ಪಾಲ್ಗೊಂಡಿದ್ದರು.