ಗರಗಂದೂರು ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢ : ಆತಂಕ ಪಡುವ ಅಗತ್ಯವಿಲ್ಲವೆಂದ ಆರೋಗ್ಯ ಇಲಾಖೆ

January 27, 2021

ಮಡಿಕೇರಿ ಜ.27 : ಕೊರೊನಾ ಸಾಂಕ್ರಾಮಿಕ ತಡೆಯ ನಿರ್ಬಂಧಗಳು ನಿಧಾನವಾಗಿ ತೆರವಾಗಿ ಸಾಮಾನ್ಯ ಬದುಕಿನತ್ತ ಜನಜೀವನ ಸಾಗುತ್ತಿದೆ ಎನ್ನುವಷ್ಟರಲ್ಲೆ ಸೋಮವಾರಪೇಟೆ ತಾಲ್ಲೂಕಿನ ಗರಗಂದೂರು ಮೊರಾರ್ಜಿ ವಸತಿ ಶಾಲೆಯ 25 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿದೆ.
ಶೈಕ್ಷಣಿಕ ಚಟುವಟಿಕೆಗಳು ಹತ್ತು ಹಲವು ನಿರ್ಬಂಧಗಳೊಂದಿಗೆ ಗರಿಗೆದರುತ್ತಿದ್ದು, ಅದರಂತೆ ಜ.11 ರಿಂದಲೇ ಗರಗಂದೂರು ಮೊರಾರ್ಜಿ ವಸತಿ ಶಾಲೆಯಲ್ಲೂ ಪಠ್ಯ ಕ್ರಮ ಆರಂಭಗೊಂಡಿದೆ. ಇಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ಇಪ್ಪತ್ತೈದು ಮಂದಿ ಪಿಯುಸಿ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದು, ಇದೀಗ ಆತಂಕ ಎದುರಾಗಿದೆ.
ಕೋವಿಡ್ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆ ವಿದ್ಯಾರ್ಥಿಗಳನ್ನು ತಕ್ಷಣ ಜಿಲ್ಲಾ ಕೇಂದ್ರ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಪರೀಕ್ಷೆಗೆ ಒಳಪಡಿಸಿದಾಗ ಅವರೆಲ್ಲರಿಗೂ ಸೋಂಕು ತಗಲಿರುವುದು ಖಚಿತ ಪಟ್ಟಿದೆ.
ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಅವರು ಖಚಿತಪಡಿಸಿದ್ದಾರೆ. ಆದರೆ ಆತಂಕ ಪಡುವ ಅಗತ್ಯವಿಲ್ಲವೆಂದು ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

error: Content is protected !!