ಮಡಿಕೇರಿ ತಾ.ಪಂ ಸಾಮಾನ್ಯ ಸಭೆ : ಕೃಷಿ ಮತ್ತು ಕಂದಾಯ ಇಲಾಖೆ ಒಂದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲು ಒತ್ತಾಯ

ಮಡಿಕೇರಿ ಜ.27 : ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಅಂಗನವಾಡಿಗಳು ಆರಂಭಗೊಳ್ಳದೆ ಇರುವ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟೀಕರಣ ಬಯಸಿದರು.
ಶಿಶು ಕಲ್ಯಾಣ ಅಭಿವೃದ್ಧಿ ಅಧಿಕಾರಿ ಶೀಲ ಮಾತನಾಡಿ, ವಾರದಲ್ಲಿ ಮೂರು ದಿನ ಮಾತ್ರ ಅಂಗನವಾಡಿಗಳನ್ನು ತೆರೆಯಲಾಗುತ್ತಿದೆ. ಅಂಗನವಾಡಿ ಕೇಂದ್ರಗಳನ್ನು ಕಡ್ಡಾಯವಾಗಿ ತೆರೆಯಬೇಕೆಂದು ಕಾರ್ಯಕರ್ತರು ಹಾಗೂ ಸಹಾಯಕಿಯಕರಿಗೆ ಸೂಚಿಸಲಾಗಿದೆ. ಅಲ್ಲದೇ ಹೊರಗುಳಿದ ಮಕ್ಕಳ ಸಮೀಕ್ಷೆಯೂ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.
ತಾ.ಪಂ ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಕೃಷಿಕ ವರ್ಗಕ್ಕೆ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು. ಈ ಎರಡು ಇಲಾಖಾಧಿಕಾರಿಗಳ ಜಂಟಿ ಸಭೆ ನಡೆಸಬೇಕು ಮತ್ತು ಒಂದೇ ಕಟ್ಟಡದಲ್ಲಿ ಎರಡೂ ಇಲಾಖೆಗಳು ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಗೆ ಸಮಗ್ರ ಮಾಹಿತಿ ನೀಡುತ್ತಿಲ್ಲ, ಅನುಪಾಲನಾ ವರದಿಯಲ್ಲಿ ಸ್ಪಷ್ಟತೆ ಇಲ್ಲ. ಮಾಹಿತಿ ಇಲ್ಲದೆ ಅಧಿಕಾರಿಗಳು ಸಭೆಗೆ ಹಾಜರಾಗುವುದು ಸರಿಯಲ್ಲ ಎಂದು ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಮತ್ತೊಬ್ಬ ಸದಸ್ಯ ಅಪ್ರುರವೀಂದ್ರ ಮಾತನಾಡಿ, ಹಾಕತ್ತೂರು-ಅತ್ತಿಮಂಗಲ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಕಷ್ಟಕರವಾಗಿದೆ. ಮರಗೋಡುವಿನಿಂದ ಹೊಸ್ಕೇರಿವರೆಗಿನ ರಸ್ತೆ ಮಳೆಯಿಂದಾಗಿ ಕೊಚ್ಚಿ ಹೋಗಿದೆ ಎಂದು ಗಮನ ಸೆಳೆದರು. ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಶೋಭಾ ಮೋಹನ್, ಶಾಸಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪರಿಶಿಷ್ಟ ಜಾತಿ, ಪಂಗಡದ ಅಂತರ್ಜಾತಿ ವಿವಾಹ ಮಾಡಿಕೊಂಡ ಜೋಡಿಗೆ ರೂ.3 ಲಕ್ಷ ಪ್ರೋತ್ಸಾಹಧನ ನೀಡುವುದು ಸರ್ಕಾರದ ನಿಯಮವಾಗಿದೆ. ಆದರೆ ಸಂಬಂಧಿಸಿದ ಇಲಾಖೆ ಕೇವಲ 1 ಲಕ್ಷ ರೂ. ನೀಡುತ್ತಿದೆ ಎಂದು ಅಪ್ರುರವೀಂದ್ರ ಇದೇ ಸಂದರ್ಭ ಆರೋಪಿಸಿದರು.
ಕೃಷಿ ಅಧಿಕಾರಿ ಮಾತನಾಡಿ ಉಚಿತ ಪಂಪ್ಸೆಟ್ ನೀಡಲು ಇಲಾಖೆ ನಿರ್ಧರಿಸಿದೆ. 5 ಹೆಚ್.ಪಿ ಸಾಮಥ್ರ್ಯದ ಪಂಪ್ಸೆಟ್ ನೀಡುವ ಅಗತ್ಯವಿದೆ ಎಂದರು. ಕಳೆದ ವರ್ಷ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗಿದ್ದು, ಈ ಬಾರಿ ಟಾರ್ಪಲ್ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದರು.
ಸಭೆಯಲ್ಲಿ ಮೀನುಗಾರಿಕಾ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಮೀನು ಹಿಡಿಯುವ ಸಲಕರಣೆಗಳನ್ನು ಉಚಿತವಾಗಿ ನೀಡಲಾಯಿತು.
ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಡಿ.ಬಿ.ಶ್ರೀಧರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.