ಮಡಿಕೇರಿ- ಭಾಗಮಂಡಲ ರಸ್ತೆ ಅವ್ಯವಸ್ಥೆ : ಜ.29 ರಂದು ರಸ್ತೆ ತಡೆ ಪ್ರತಿಭಟನೆ

January 27, 2021

ಮಡಿಕೇರಿ ಜ.27 : ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ರಸ್ತೆ ಅವ್ಯವಸ್ಥೆಯನ್ನು ಖಂಡಿಸಿ ಜ.29 ರಂದು ರಸ್ತೆ ತಡೆ ಪ್ರತಿಭಟನೆ ನಡೆಸಲು ತಾಳತ್ತಮನೆಯ ನೇತಾಜಿ ಯುವಕ ಮಂಡಲ ನಿರ್ಧರಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಮಂಡಲದ ಅಧ್ಯಕ್ಷ ಬಿ.ಬಿ.ಸುದೀಪ್ ರೈ ಹಾಗೂ ಕಾರ್ಯದರ್ಶಿ ಬಿ.ಆರ್.ಯತೀಶ್ ರೈ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಇರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಅಡಚಣೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ರಸ್ತೆಯನ್ನು ಡಾಂಬರೀಕರಣ ಮಾಡುವ ಉದ್ದೇಶದಿಂದ ಮಂಗಳೂರು-ಭಾಗಮಂಡಲ ಕೂಡು ರಸ್ತೆಯಿಂದ ಮೂರ್ನಾಡು ಬೈಪಾಸ್ ರಸ್ತೆಯವರೆಗೆ ಮೇಲ್ಪದರವನ್ನು ತೆಗೆದು ಹಾಕಲಾಗಿದೆ. ಕಾಮಗಾರಿಯನ್ನು ಅರ್ಧದಲ್ಲೇ ಬಿಟ್ಟು ಹಲವು ದಿನಗಳೇ ಕಳೆದಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ. ಅಕ್ಕಪಕ್ಕದ ಮನೆಗಳಿಗೆ ಧೂಳು ತುಂಬಿ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಎರಡು ತಿಂಗಳು ಕಳೆದರೂ ಡಾಂಬರೀಕರಣ ಮಾಡದೇ ನಿರ್ಲಕ್ಷ್ಯ ವಹಿಸಲಾಗಿದ್ದು, ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿರುವುದು ಸರಿಯಾದ ಕ್ರಮವಲ್ಲವೆಂದು ಪ್ರಮುಖರು ತಿಳಿಸಿದ್ದಾರೆ.
ಕೊಡಗಿನ ಪವಿತ್ರ ಕ್ಷೇತ್ರ ತಲಕಾವೇರಿಗೆ ತೆರಳುವ ರಸ್ತೆ ಇದಾಗಿದ್ದು, ಪ್ರತಿದಿನ ರಾಜ್ಯ, ಹೊರರಾಜ್ಯಗಳ ನೂರಾರು ವಾಹನಗಳು ಸಂಚರಿಸುತ್ತವೆ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಹಲವು ಬಾರಿ ಮೌಖಿಕವಾಗಿ ಗುತ್ತಿಗೆದಾರರಲ್ಲಿ ಹಾಗೂ ಸಂಬಂಧಿಸಿದ ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಅವರ ಬಳಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಆರೋಪಿಸಿದ್ದಾರೆ.
ಶೀಘ್ರ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ಜ.29 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 11 ಗಂಟೆಯವರೆಗೆ ತಾಳತ್ತಮನೆಯ ಮೇಕೇರಿ, ಮೂರ್ನಾಡು ಬೈಪಾಸ್ ರಸ್ತೆಯ ಬಳಿ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದೆಂದು ಬಿ.ಬಿ.ಸುದೀಪ್ ರೈ ತಿಳಿಸಿದ್ದಾರೆ.

error: Content is protected !!