ಹುಲಿ ನೋಡಿ ಕುಸಿದು ಬಿದ್ದ ವಿದ್ಯಾರ್ಥಿನಿ : ಟಿ.ಶೆಟ್ಟಿಗೇರಿಯಲ್ಲಿ ಘಟನೆ : ಅರಣ್ಯ ಇಲಾಖೆಯಿಂದ ಹುಲಿ ಪತ್ತೆ ಕಾರ್ಯಾಚರಣೆ ಚುರುಕು

ಮಡಿಕೇರಿ ಜ.27 : ಹುಲಿಯನ್ನು ಪ್ರತ್ಯಕ್ಷ ಕಂಡು ಆತಂಕಗೊಂಡ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಆಸ್ಪತ್ರೆ ಸೇರಿದ ಘಟನೆ ಪೊನ್ನಂಪೇಟೆ ವ್ಯಾಪ್ತಿಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.
ಕಳೆದ ಎರಡು ವಾರಗಳಿಂದ ಹಸುಗಳನ್ನು ಬೇಟೆಯಾಡುತ್ತಿದ್ದ ಹುಲಿ ಇಂದು ಬೆಳಗ್ಗೆ ಸ್ಥಳೀಯ ಬೆಳೆಗಾರ ಮಚ್ಚಮಾಡ ಟಿ.ಕಾರ್ಯಪ್ಪ ಎಂಬುವವರ ತೋಟವನ್ನು ಪ್ರವೇಶಿಸುತ್ತಿದ್ದ ಸಂದರ್ಭ ಗೋಣಿಕೊಪ್ಪ ವಿದ್ಯಾನಿಕೇತನ ಶಾಲೆ ವಿದ್ಯಾರ್ಥಿನಿ ತಶ್ಮ ಭಯಗೊಂಡು ಕುಸಿದು ಬಿದ್ದಿದ್ದಾಳೆ. ತಕ್ಷಣ ಈಕೆಯನ್ನು ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕರೆತರಲಾಯಿತು. ಆದರೆ ಗಾಬರಿಯಿಂದ ತಶ್ಮ ಹುಲಿ ಹುಲಿ ಎಂದು ಕನವರಿಸುತ್ತಿದ್ದು, ಪೋಷಕರು ಆತಂಕಗೊಂಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶ್ರೀಮಂಗಲ ವಲಯ ಅರಣ್ಯ ವಿಭಾಗದ ಅಧಿಕಾರಿಗಳ ತಂಡ ಕೂಂಬಿಂಗ್ ಕಾರ್ಯಾಚರಣೆ ನಡೆಸಿತು. ಆದರೆ ಹುಲಿ ಮಾತ್ರ ಪ್ರತ್ಯಕ್ಷವಾಗಿಲ್ಲ, ಇದರಿಂದ ಗ್ರಾಮಸ್ಥರು ಹಾಗೂ ಕಾರ್ಮಿಕ ವರ್ಗದಲ್ಲಿ ಭೀತಿಯ ವಾತಾವರಣ ಮುಂದುವರಿದಿದೆ.
::: ರೈತ ಸಂಘಟನೆಗಳ ಅಸಮಾಧಾನ :::
ಕುಸಿದು ಬಿದ್ದು ಗಾಯಗೊಂಡ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದ ರೈತಮುಖಂಡರುಗಳಾದ ಚೆಟ್ಟಂಗಡ ಕಂಬ ಕಾರ್ಯಪ್ಪ, ಚೆಟ್ಟಂಗಡ ತರುಣ್, ಚೆಟ್ಟಂಗಡ ಕಿರಣ್, ಚೆಟ್ಟಂಗಡ ಬಿಪಿನ್ ಬೋಪಣ್ಣ ಮತ್ತಿತರರು ಸಾಂತ್ವನ ಹೇಳಿದರು.
ಚಿಕಿತ್ಸಾ ವೆಚ್ಚವನ್ನು ಅರಣ್ಯ ಇಲಾಖೆಯೇ ಭರಿಸಬೇಕು ಮತ್ತು ತಕ್ಷಣ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.