ಉದ್ಯಾನವನದ ನಿರ್ವಹಣೆಗೆ ಮಡಿಕೇರಿ ಮಹಿಳಾ ಕಾಂಗ್ರೆಸ್ ಒತ್ತಾಯ

January 28, 2021

ಮಡಿಕೇರಿ ಜ.28 : ನಗರಸಭಾ ಕಚೇರಿ ಸಮೀಪದಲ್ಲೇ ಇರುವ ಉದ್ಯಾನವನ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದು, ಇದನ್ನು ಆಕರ್ಷಣೀಯ ಕೇಂದ್ರವನ್ನಾಗಿ ಮಾರ್ಪಡಿಸುವ ಮೂಲಕ ನಗರದ ಸೌಂದರ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರದ ವಿವಿಧ ಬಡಾವಣೆಗಳಲ್ಲಿರುವ ನಗರಸಭೆಗೆ ಸೇರಿದ ಉದ್ಯಾನವನಗಳು ನಿರ್ವಹಣೆ ಇಲ್ಲದೆ ಕಳೆಗುಂದಿವೆ. ನಗರಸಭಾ ಕಚೇರಿಯ ಸಮೀಪದಲ್ಲೇ ಉದ್ಯಾನವನವೊಂದಿದ್ದು, ಇದು ಪಾಳು ಬಿದ್ದಿದ್ದರೂ ಅಭಿವೃದ್ಧಿ ಪಡಿಸುವ ಕಾಳಜಿಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೋರುತ್ತಿಲ್ಲವೆಂದು ಆರೋಪಿಸಿದ್ದಾರೆ.
ಪ್ರತಿವರ್ಷ ಉದ್ಯಾನವನದ ನಿರ್ವಹಣೆಗೆಂದು ನಗರಸಭೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಈ ಹಣವನ್ನು ಸಾರ್ವಜನಿಕರಿಂದ ತೆರಿಗೆಯ ಜೊತೆಯಲ್ಲೇ ಸಂಗ್ರಹಿಸುತ್ತಿದೆ, ಆದರೆ ಉದ್ಯಾನವನಗಳು ಮಾತ್ರ ಅನಾಥವಾಗಿವೆ. ತಮ್ಮ ಕಣ್ಮುಂದೆಯೇ ನಗರದ ಹೃದಯ ಭಾಗದಲ್ಲಿ ಉದ್ಯಾನವನ ಪಾಳು ಬಿದ್ದಿದ್ದರೂ ಅಧಿಕಾರಿಗಳು ಜಾಣ ಕುರುಡಿಗೆ ಶರಣಾಗಿದ್ದಾರೆ ಎಂದು ಪಾರ್ವತಿ ಫ್ಯಾನ್ಸಿ ಟೀಕಿಸಿದ್ದಾರೆ.
ಪ್ರತಿದಿನ ಮಂಗೇರಿರ ಮುತ್ತಣ್ಣ ವೃತ್ತದ ಮೂಲಕವೇ ಸಾವಿರಾರು ಪ್ರವಾಸಿಗರು ಸಾಗುತ್ತಾರೆ. ನಗರಸಭಾ ಕಚೇರಿ ಬಳಿಯ ಉದ್ಯಾನವನ ಆಕರ್ಷಣೀಯವಾಗಿದ್ದಿದ್ದರೆ ಪ್ರವಾಸಿಗರಿಗೂ ಮಡಿಕೇರಿಯ ಸೌಂದರ್ಯದ ಬಗ್ಗೆ ಮತ್ತಷ್ಟು ಅಭಿಮಾನ ಮೂಡುತ್ತಿತ್ತು. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಈ ಹಿಂದಿನ ಆಡಳಿತ ಮಂಡಳಿಗಳು ಕೇವಲ ಹಣ ಪೋಲು ಮಾಡಿವೆಯೇ ಹೊರತು ನಿರ್ವಹಣೆಗೆ ಆದ್ಯತೆ ನೀಡಿಲ್ಲವೆಂದು ಆರೋಪಿಸಿದ್ದಾರೆ.
ಉದ್ಯಾನವನದೊಳಗಿನ ವರ್ಣರಂಜಿತ ಕಾರಂಜಿ ಕೊಳ ನಿರ್ಲಕ್ಷಿಸಲ್ಪಟ್ಟಿದ್ದು, ಸ್ತಬ್ಧಗೊಂಡು ಯಂತ್ರಗಳೆಲ್ಲವೂ ತುಕ್ಕು ಹಿಡಿಯುತ್ತಿದೆ. ನಿರ್ವಹಣೆ ಮಾಡಲು ಸಾಧ್ಯವಾಗದೇ ಇದ್ದಿದ್ದರೆ ಅಭಿವೃದ್ಧಿಯ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ಯಾಕೆ ಪೋಲು ಮಾಡಬೇಕಾಗಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಮಡಿಕೇರಿಯನ್ನು ಸ್ವಿಜóರ್ ಲ್ಯಾಂಡ್ ಮಾಡುತ್ತೇವೆ ಎಂದು ಎಲ್ಲಾ ಜನಪ್ರತಿನಿಧಿಗಳು ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ ನಗರಸಭೆಯ ಸಮೀಪದಲ್ಲೇ ಇರುವ ಸಣ್ಣ ಉದ್ಯಾನವನವೊಂದನ್ನು ಅಭಿವೃದ್ಧಿ ಪಡಿಸಲು ಇವರಿಂದ ಸಾಧ್ಯವಾಗಿಲ್ಲ, ಅಲ್ಲದೆ ನಗರದ ರಸ್ತೆಗಳನ್ನೇ ದುರಸ್ತಿ ಪಡಿಸುವ ಕಾಳಜಿಯನ್ನು ಇವರುಗಳು ತೋರುತ್ತಿಲ್ಲವೆಂದು ಪಾರ್ವತಿ ಫ್ಯಾನ್ಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಕ್ಷಣ ನಗರದ ಹೃದಯ ಭಾಗದಲ್ಲಿರುವ ಉದ್ಯಾನವನವನ್ನು ಮೇಲ್ದರ್ಜೆಗೇರಿಸಿ ಹೈಟೆಕ್ ಸ್ಪರ್ಷ ನೀಡುವ ಮೂಲಕ ಆಕರ್ಷಣೀಯ ಕೇಂದ್ರವನ್ನಾಗಿ ಮಾರ್ಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

error: Content is protected !!