ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ : ಮನೆ ಸ್ವಾಧೀನಪಡಿಸಿಕೊಳ್ಳಲು ಮನವಿ

January 28, 2021

ಮಡಿಕೇರಿ ಜ.28 : ದಿಡ್ಡಳ್ಳಿ ನಿರಾಶ್ರಿತರಿಗಾಗಿ ಬಸವನಹಳ್ಳಿಯಲ್ಲಿ ರಾಜೀವಗಾಂಧಿ ವಸತಿ ನಿಗಮದಿಂದ ಅನುಮೋದಿತವಾದ ನಿವೇಶನಗಳಲ್ಲಿ 174 ಮನೆಗಳನ್ನು ಹಾಗೂ ಬ್ಯಾಡಗೊಟ್ಟದಲ್ಲಿ 354 ಮನೆಗಳನ್ನು ನಿರ್ಮಿಸಿದ್ದು, ಅನುಮೋದಿತರಾದ ಫಲಾನುಭವಿಗಳು ಸೂಕ್ತ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಿ ಹಕ್ಕುಪತ್ರ ಪಡೆದು ಸ್ವಾಧೀನಪಡಿಸಿಕೊಳ್ಳಬೇಕಿದೆ.
ಸೋಮವಾರಪೇಟೆ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಬಸವನಹಳ್ಳಿ ಮತ್ತು ಕೂಡಿಗೆ ಗ್ರಾಮ ಪಂಚಾಯಿತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕೇಂದ್ರಗಳನ್ನು ಕಲ್ಪಿಸಿ ಮೂಲಭೂತ ಸೌಲಭ್ಯವನ್ನು ಒದಗಿಸಲಾಗಿದೆ. ಆದರೆ ಈ ಪುನರ್ವಸತಿ ಕೇಂದ್ರಗಳಲ್ಲಿ ಮನೆಗಳನ್ನು ನಿರ್ಮಿಸಿ 1 ವರ್ಷ ಕಳೆದರೂ ಹಲವು ಮನೆಗಳ ಫಲಾನುಭವಿಗಳು ಸೂಕ್ತ ದಾಖಲಾತಿ ಸಲ್ಲಿಸದೆ ಮನೆ ಸ್ವಾಧೀನಪಡಿಸಿಕೊಳ್ಳದೆ ಖಾಲಿ ಇರುವುದು ಕಂಡುಬಂದಿದೆ. ಆದ್ದರಿಂದ ಈ ಪುನರ್ವಸತಿ ಕೇಂದ್ರಗಳಲ್ಲಿ ರಾಜೀವ್‍ಗಾಂಧಿ ವಸತಿ ನಿಗಮದಿಂದ ಅನುಮೋದಿತರಾದ ಫಲಾನುಭವಿಗಳು 15 ದಿನಗಳ ಒಳಗೆ ಸೂಕ್ತ ದಾಖಲಾತಿಗಳನ್ನು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ಇವರ ಕಚೇರಿಗೆ ಸಲ್ಲಿಸಿ ಮನೆಗಳನ್ನು ಸ್ವಾಧೀನಪಡಿಸಿಕೊಳ್ಳಬೇಕು, ಇಲ್ಲವಾದಲ್ಲಿ ಮಂಜೂರಾಗಿರುವ ಮನೆಗಳನ್ನು ರದ್ದುಪಡಿಸಿ ಇಲಾಖೆಯ ಮಾರ್ಗಸೂಚಿಯಂತೆ ಅರ್ಹ ವಸತಿ ರಹಿತ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು(ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ-08276-281115 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶೇಖರ್ ಅವರು ತಿಳಿಸಿದ್ದಾರೆ.

error: Content is protected !!