ಕೊಡವ ಸಾಹಿತ್ಯ ಅಕಾಡೆಮಿಯಿಂದ ಕಾರ್ಯಪ್ಪ ಜನ್ಮ ದಿನಾಚರಣೆ : ತ್ರೈಮಾಸಿಕ ಸಂಚಿಕೆ ಬಿಡುಗಡೆ

January 28, 2021

ಮಡಿಕೇರಿ ಜ.28 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 122ನೇ ಜನ್ಮದಿನಾಚರಣೆ ಹಾಗೂ ಪೊಂಗುರಿ ಕೊಡವ ತ್ರೈಮಾಸಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಅವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಸೂಕ್ಷ್ಮ ಜೀವಿಯಾಗಿದ್ದು, ನಾಯಕತ್ವದ ಗುಣಗಳನ್ನು ಹೊಂದಿದ್ದರು. ಸ್ವಾತಂತ್ರ್ಯದ ನಂತರ ಭಾರತ ಹಾಗೂ ಪಾಕಿಸ್ತಾನ ಇಬ್ಭಾಗವಾದಾಗ ಜೊತೆಗಿದ್ದ ಪಾಕಿಸ್ತಾನದ ಸೇನಾನಿಗಳನ್ನು ಶತ್ರುಗಳಂತೆ ಕಾಣಬೇಕಾದ ಅನಿವಾರ್ಯ ಎದುರಾಗಿ ಭಾವುಕರಾದರು. ಆದರೂ ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಸೇನೆಯಲ್ಲಿ ಅಪ್ರತಿಮ ಸಾಧನೆ ಮಾಡಿದರು. ಇದರಿಂದಾಗಿಯೇ ಕಾರ್ಯಪ್ಪ ಅವರ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದರು.
ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದ ಸಂದರ್ಭ ನೆಹರು ಅವರಿಗೆ ಸಲಹೆ ನೀಡಿದ ಕಾರ್ಯಪ್ಪ ಅವರ ಬಗ್ಗೆ ಕೆಲವು ಪತ್ರಿಕೆಗಳು ಕಾರ್ಯಪ್ಪ ಅವರ ವಿರುದ್ಧವಾಗಿ ಲೇಖನ ಬರೆದಿದ್ದವು. ಆದರೆ, ಸ್ವರಾಜ್ ಪತ್ರಿಕೆ ಹಾಗೂ ಭಾರತ ದೇಶದ ಜನ ಕಾರ್ಯಪ್ಪ ಅವರಿಗೆ ಭಾರೀ ಬೆಂಬಲ ನೀಡಿ ಇತಿಹಾಸ ಸೃಷ್ಟಿಸಿದರು ಎಂದರು.
ಭಾರತ-ಪಾಕ್ ಯುದ್ಧದ ವೇಳೆಯಲ್ಲಿ ಪಾಕ್ ಸೈನಿಕರು ಕಾರ್ಯಪ್ಪ ಅವರನ್ನು ಕಂಡು ಗೌರವ ರಕ್ಷೆ ನೀಡಿದ್ದು, ಇತಿಹಾಸದಲ್ಲಿ ದಾಖಲಾಗಿದೆ ಎಂದು ಅಪ್ಪಣ್ಣ ವಿವರಿಸಿದರು.

ದಿ.ಡಾ.ಐಚೆಟ್ಟೀರ ಮಾ.ಮುತ್ತಣ್ಣ ಅವರು ಬರೆದಿರುವ ಮೊಣ್ಣಂಡ ಶೋಭಾ ಸುಬ್ಬಯ್ಯ ತರ್ಜುಮೆ ಮಾಡಿರುವ ಜನರಲ್ ಕಾರ್ಯಪ್ಪ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಫೀ.ಮಾ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೆÇೀರಂ ಸಂಚಾಲಕ ನಿವೃತ್ತ ಮೇಜರ್ ಜನರಲ್ ಬಿದ್ದಂಡ ನಂಜಪ್ಪ ಅವರು ಕಾರ್ಯಪ್ಪ ಅವರ ಧೈರ್ಯ, ಸಾಹಸದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ನಿವೃತ್ತ ಸೇನಾಧಿಕಾರಿಗಳಾದ ಟಿ.ಎಸ್.ಗಿಲ್ ಹಾಗೂ ದಲ್ಜೀರ್ ಸಿಂಗ್ ಅವರ ನೆರವಿನಿಂದ ದೆಹಲಿಯ ಪೆರೇಡ್ ಮೈದಾನಕ್ಕೆ ಫೀ.ಮಾ ಕಾರ್ಯಪ್ಪ ಅವರ ನಾಮಕರಣ ಮಾಡಿರುವುದು ಫೀ.ಮಾ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೆÇೀರಂ ಮೊದಲ ಜಯವಾಗಿದೆ ಎಂದರು. ಇದೀಗ ಸೈನಿಕರನ್ನು ಸ್ಮರಣೆ ಮಾಡುವ ನಿಟ್ಟಿನಲ್ಲಿ ಜನರಲ್ ತಿಮ್ಮಯ್ಯ ಮ್ಯೂಸಿಯಂ ಸಿದ್ಧಗೊಳಿಸಿದ ಹೆಗ್ಗಳಿಕೆ ನಮ್ಮದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರುಗಳನ್ನು ಮಾದರಿಯಾಗಿಸಿಕೊಂಡು ಕೊಡಗಿನ ಅನೇಕ ಯುವಕರು ಸೈನ್ಯದಲ್ಲಿ ಉತ್ತಮ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವೆಂದರು.
ಅಕಾಡೆಮಿಯ ತ್ರೈಮಾಸಿಕ ಪೆÇಂಗುರಿ ಸಂಚಿಕೆಯನ್ನು ಫೀ.ಮಾ ಕಾರ್ಯಪ್ಪ, ಜ.ತಿಮ್ಮಯ್ಯ ಫೆÇೀರಂ ಅಧ್ಯಕ್ಷ ನಿವೃತ್ತ ಕರ್ನಲ್ ಕಡ್ರತಂಡ ಸುಬ್ಬಯ್ಯ ಬಿಡುಗಡೆಗೊಳಿಸಿದರು.
ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ ಉಪಸ್ಥಿತರಿದ್ದರು.
ಆಲೇಮಾಡ ಚಿತ್ರಾನಂಜಪ್ಪ ಪ್ರಾರ್ಥಿಸಿ, ಅಕಾಡೆಮಿ ರಿಜಿಸ್ಟ್ರಾರ್ ಅಜ್ಜಿಕುಟ್ಟೀರ ಗಿರೀಶ್ ಸ್ವಾಗತಿಸಿ, ಸದಸ್ಯೆ ಬಬ್ಬೀರ ಸರಸ್ವತಿ ನಿರೂಪಿಸಿ, ವಂದಿಸಿದರು.

error: Content is protected !!