ಕೋವಿಡ್ ಆತಂಕ : ಗರಗಂದೂರು ವಸತಿ ಶಾಲೆಗೆ ಜಿ.ಪಂ.ಸಿಇಒ ಭೇಟಿ

28/01/2021

ಮಡಿಕೇರಿ ಜ.28 : ಸೋಮವಾರಪೇಟೆ ತಾಲ್ಲೂಕಿನ ಗರಗಂದೂರಿನ ವಸತಿ ಶಾಲೆಯಲ್ಲಿ 25 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ವರದಿಯಾಗಿರುವ ಹಿನ್ನೆಲೆ ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ಕೆ.ಮೋಹನ್ ಅವರು ಗುರುವಾರ ವಸತಿ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು.
ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯದಲ್ಲಿ ಸ್ಯಾನಟೈಸ್ ಮಾಡುವಂತೆ ಸೂಚಿಸಿದರು. ಇಬ್ಬರು ಅಡುಗೆಯವರನ್ನು ಬೇರೆ ವಿದ್ಯಾರ್ಥಿ ನಿಲಯದಿಂದ ನಿಯೋಜಿಸಲು ಬಿಸಿಎಂ ಅಧಿಕಾರಿಗೆ ನಿರ್ದೇಶನ ನೀಡಿದರು. 7 ದಿನದ ನಂತರ ವಸತಿ ಶಾಲೆ ಮಕ್ಕಳಿಗೆ ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಲು ಜಿ.ಪಂ.ಸಿಇಒ ಸೂಚಿಸಿದರು.
ಕಂಟೈನೆಮೆಂಟ್ ವಲಯದಲ್ಲಿ ಯಾರೂ ಒಳ ಪ್ರವೇಶ ಹಾಗೂ ಹೊರ ಹೋಗದಂತೆ ನೋಡಿಕೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಸ್ಯಾನಟೈಸ್ ಮಾಡಲು ಪಿಡಿಒಗೆ ಸೂಚಿಸಿದರು. ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸುವಂತೆ ಪ್ರಾಶುಂಪಾಲರಿಗೆ ನಿರ್ದೇಶನ ನೀಡಿದರು.
ವಿದ್ಯಾರ್ಥಿಗಳಿಗೆ ಆರೋಗ್ಯ ಉತ್ತಮವಾಗಿದ್ದು, ಯಾರೂ ಸಹ ಗಾಬರಿಯಾಗುವ ಅಗತ್ಯವಿಲ್ಲ ಎಂದು ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.
ಕೋವಿಡ್ ವಾರ್ ರೂಮ್ ಉದ್ಘಾಟನಾ ಸಂಧರ್ಭದಲ್ಲಿ ಜಿಲ್ಲಾದಿಕಾರಿ ಚಾರುಲತಾ ಸೋಮಲ್ ಅವರು ಜಿಲ್ಲೆಯ ಎಲ್ಲಾ ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳು, ಹಾಡಿಗಳು, ಪರಿಶಿಷ್ಟ ಜಾತಿ ಕಾಲೋನಿಗಳು, ಕೋಳಚೆ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಕೋವಿಡ್ ಪರೀಕ್ಷೆ ಮಾಡುವಂತೆ ಸೂಚಿಸಿದರು. ಹಾಗೆಯೇ 50 ವರ್ಷ ಮೇಲ್ಪಟ್ಟವರಿಗೂ ಕೋವಿಡ್ ಪರೀಕ್ಷೆ ಮಾಡುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಪ್ರವಾಸಿ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದಲ್ಲಿ ದಂಡ ವಿಧಿಸುಂತೆ ಪೊಲೀಸ್, ನಗರಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಜಿಲ್ಲೆಯ ಎಲ್ಲಾ ವಸತಿ, ಹಾಡಿಗಳು, ಸಂತೆ, ಕೋಳಚೆ ಪ್ರದೇಶಗಳು ಇತ್ತರೆ ವಲ್ನರಬಲ್ ಪ್ರದೇಶಗಳಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.
ಗುರುವಾರ 4 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದ್ದರಿಂದ ಇವರನ್ನು ಸಹ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಒಟ್ಟು ಇದುವರೆಗೆ 29 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, 28 ವಿದ್ಯಾರ್ಥಿಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಳಿದ ಒಬ್ಬರು ಮೈಸೂರು ಜಿಲ್ಲೆಗೆ ತೆರಳಿದ್ದು, ಸಂಬಂಧಪಟ್ಟ ಜಿಲ್ಲೆಯ ಅಧಿಕಾರಿಗಳಿಗೆ ಮಾಹಿತಿ ನೀಡಿಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದರು. ಡಾ.ಮಹೇಶ್, ಡಾ.ಶ್ರೀನಿವಾಸ್, ಪ್ರಾಂಶುಪಾಲರಾದ ಲೋಕೇಶ್ ಇತರರು ಹಾಜರಿದ್ದರು.