ಉದ್ಧವ್ ಠಾಕ್ರೆ ಹೇಳಿಕೆಯನ್ನು ನಿರ್ಲಕ್ಷಿಸುವುದು ಸೂಕ್ತ : ನಾಗಾಭರಣ ಅಭಿಪ್ರಾಯ

January 29, 2021

ಮಡಿಕೇರಿ ಜ.29 : ಗಡಿ ವಿಚಾರದಲ್ಲಿ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆಯನ್ನು ನಿರ್ಲಕ್ಷಿಸುವುದು ಒಳ್ಳೆಯದು, ನಾವು ಪ್ರತಿಕ್ರಿಯಿಸುತ್ತಾ ಹೋದರೆ ಏನಾದರೂ ಆಗುತ್ತೆ ಎನ್ನುವ ಭಾವನೆ ಅವರಿಗೆ ಮೂಡುತ್ತದೆ. ಹೀಗಾಗಿಯೇ ಪದೇಪದೇ ಕೆಣಕುತ್ತಾ ಹೋಗುತ್ತಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಧ್ಯಮಗಳು ಅವರ ವಿಚಾರವನ್ನು ಬಳಸದೇ ಹೋದರೆ ತಾನಾಗಿಯೇ ಕಡಿಮೆಯಾಗುತ್ತದೆ ಎಂದರು. ಅವರ ವಿಚಾರಗಳು ನೇರವಾಗಿಲ್ಲ, ಸಾಂದರ್ಭಿಕವಾಗಿಯೂ ಇಲ್ಲ, ಮಾತ್ರವಲ್ಲದೇ ಹೇಳಿಕೆ ಕೊಡುತ್ತಿರುವವರಿಗೆ ತಾತ್ವಿಕವಾದ ಹಿಡಿತವಿಲ್ಲ. ಹುಚ್ಚನ ಹೇಳಿಕೆಗಳನ್ನು ಪಕ್ಕಕ್ಕೆ ಇಟ್ಟರೆ ಬಹಳ ಒಳ್ಳೆಯದÉುಂದು ಉದ್ಧವ್ ಠಾಕ್ರೆ ಬಗ್ಗೆ ಪರೋಕ್ಷವಾಗಿ ನಾಗಾಭರಣ ಅವರು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಮೇಲೆ ಆಕ್ರಮಣಕ್ಕೆ ಬಂದರೆ ಎದುರಿಸೋದಕ್ಕೂ ಸಿದ್ಧರಿರಬೇಕು ಎಂದು ಹೇಳಿದ ನಾಗಾಭರಣ, ಮರಾಠಿಗರು ಎಂದೂ ನೇರ ಯುದ್ಧ ಮಾಡಿಲ್ಲ. ಅವರು ಗೆರಿಲ್ಲಾ ಯುದ್ಧ ತಂತ್ರವನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಕನ್ನಡಿಗರಿಗೆ ದಾಳಿಯನ್ನು ತಡೆಯೋದೂ ಗೊತ್ತಿದೆ ಎದುರಾಳಿಗಳನ್ನು ಮೂಲೆಗುಂಪು ಮಾಡೋದೂ ಗೊತ್ತಿದೆ ಎಂದು ಹೇಳಿದರಲ್ಲದೇ, ಬೆಳಗಾವಿ ವಿಚಾರ ನನಗೆ ಮರೆತ ಅಧ್ಯಾಯವಾಗಿದೆ. ವ್ಯವಸ್ಥೆಯೊಳಗೆ ಬೆಳಗಾವಿ ಕರ್ನಾಟಕದ್ದೇ ಆಗಿದ್ದು, ಒಂದಿಂಚು ಜಾಗವನ್ನೂ ಬಿಟ್ಟುಕೊಡುವ ಇರಾದೆ ಯಾರಿಗೂ ಇಲ್ಲ ಎಂದು ನಾಗಾಭರಣ ಸ್ಪಷ್ಟಪಡಿಸಿದರು.

error: Content is protected !!