ಕೊಡಗಿನಲ್ಲಿ ಮತ್ತೆ ಗಡಿ ಉತ್ಸವ : ಟಿ.ಎಸ್.ನಾಗಾಭರಣ ಇಂಗಿತ

January 29, 2021

ಮಡಿಕೇರಿ ಜ.29 : ಕೊಡಗು ಜಿಲ್ಲೆಯಲ್ಲಿ ದಶಕಗಳ ಹಿಂದೆಯೇ ನಿಂತು ಹೋಗಿರುವ ಗಡಿ ಉತ್ಸವವನ್ನು ಮತ್ತೆ ಪ್ರಾರಂಭಿಸಲು ಕನ್ನಡ ಅಭಿವೃದ್ದಿ ಪ್ರಾಧಿಕಾರ ಕಾರ್ಯೋನ್ಮುಖವಾಗಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಸಾಹಿತಿ ಟಿ.ಎಸ್. ನಾಗಾಭರಣ ಭರವಸೆ ನೀಡಿದರು.
ಮಡಿಕೇರಿಯಲ್ಲಿ ಹಮ್ಮಿಕೊಳ್ಳಲಾಗಿರುವ 15ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಮಡಿಕೇರಿಯಲ್ಲಿ ಕನ್ನಡ ಜಾಗೃತಿ ಸಮಿತಿ ಪದಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ಕೊಡಗು ಜಿಲ್ಲೆಯಲ್ಲಿ ಕನ್ನಡ ಜಾಗೃತಿ ಅಭಿಯಾನ ಮತ್ತು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸಲಹೆ ಸೂಚನೆ ನೀಡಿದ ನಾಗಾಭರಣ, ಗಡಿ ಗ್ರಾಮಗಳಲ್ಲೂ ಕನ್ನಡ ಕಾರ್ಯಕ್ರಮಗಳ ಅನುಷ್ಟಾನವನ್ನು ಬುಡ ಮಟ್ಟದಿಂದಲೇ ಮಾಡಬೇಕೆಂದು ಸಲಹೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟಿ.ಎಸ್. ನಾಗಾಭರಣ, ಕನ್ನಡ ಕಾಯಕ ವರ್ಷ ಅಭಿಯಾನ ರಾಜ್ಯದ ಬಹುತೇಕ ಭಾಗಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಮುಖ್ಯವಾಗಿ ಬ್ಯಾಂಕ್‍ಗಳಲ್ಲಿ ಕನ್ನಡ ಬಳಕೆ ಆಧ್ಯತೆ ನೀಡುವ ಕುರಿತು ಅಭಿಯಾನ ನಡೆಸಲಾಗುತ್ತಿದ್ದು, ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಹೇಳಿದರು. ಅನುಷ್ಟಾನ, ಶಿಕ್ಷಣ ಮತ್ತು ಉದ್ಯೋಗ ಈ ಅಭಿಯಾನದ ಒಂದು ಭಾಗವಾಗಿದ್ದು, ಇದೊಂದು ನಿರಂತರ ಪ್ರಕ್ರಿಯೆಯಾಗಿದೆ ಎಂದು ಹೇಳಿದರು. ಕನ್ನಡೇತರರ ಮನ ವೊಲಿಸಿ ಅವರನ್ನು ಕೂಡ ಕನ್ನಡಿಗರಾಗಿ ಬದುಕು ಕಟ್ಟಿಕೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ. ‘ನಿರಂತರ ಕನ್ನಡ ಕಲಿಕೆ-ನಿರಂತರ ಕನ್ನಡ ಬಳಕೆ’ ಇದು ಕನ್ನಡ ಕಾಯಕ ವರ್ಷದ ಉದ್ಘೋಷ ವಾಕ್ಯವಾಗಿದೆ ಎಂದು ನಾಗಾಭರಣ ಮಾಹಿತಿ ನೀಡಿದರು.
ಕೊಡಗು ಜಿಲ್ಲಾ ಗಡಿ ಭಾಗ ಕರಿಕೆ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದರೂ ಕೂಡ ಅದನ್ನು ನಿರ್ಲಕ್ಷ್ಯ ಮಾಡಲಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಾಗಾಭರಣ, ಕಳೆದ 65 ವರ್ಷಗಳಿಂದ ಗಡಿ ಭಾಗದ ಸಮಸ್ಯೆಗಳು ಯಾಕೆ ಪರಿಹಾರ ವಾಗಿಲ್ಲ ಎಂದು ಪ್ರಶ್ನಿಸಿದರು. ಸಾರ್ವಜನಿಕರ ನ್ಯಾಯೋಚಿತ ಬೇಡಿಕೆಯನ್ನು ಅಧಿಕಾರಿಗಳು ಅನುಷ್ಟಾನ ಮಾಡಬೇಕಿದೆ. ಅಧಿಕಾರಿಗಳಿಗೆ ಇಚ್ಚಾಶಕ್ತಿ ಮತ್ತು ನಮ್ಮ ರಾಜ್ಯದ ಬಗ್ಗೆ ಅಭಿಮಾನ ಇರಬೇಕು. ಇದು ಇಲ್ಲವಾದಲ್ಲಿ ಸಮಸ್ಯೆಗಳು ಪರಿಹಾರವಾಗದೇ ಉಳಿದು ಕೊಳ್ಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕರಿಕೆಯ ಸಮಸ್ಯೆಯನ್ನು ವಿಶೇಷವಾಗಿ ಪರಿಗಣಿಸಿ ಅದರ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ ಅದಕ್ಕೊಂದು ತಾತ್ವಿಕ ಅಂತ್ಯ ಕಾಣಿಸಲಾಗುತ್ತದೆ ಎಂದೂ ನಾಗಾಭರಣ ಅಭಯ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಗಡಿ ಉತ್ಸವ ನಡೆಯದೇ ದಶಕಗಳೇ ಕಳೆದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಆಶ್ಚರ್ಯ ವ್ಯಕ್ತಪಡಿಸಿದ ಟಿ.ಎಸ್. ನಾಗಾಭರಣ ದಶಕಗಳಿಂದ ಕೊಡಗಿನಲ್ಲಿ ಗಡಿ ಉತ್ಸವವೇ ನಡೆದಿಲ್ಲವೇ ಎಂದು ಮರು ಪ್ರಶ್ನಿಸಿದರಲ್ಲದೇ, ತಕ್ಷಣವೇ ಅದಕ್ಕೊಂದು ಪ್ರಸ್ತಾವನೆಯನ್ನು ಸಿದ್ದಪಡಿಸುವಂತೆ ಕನ್ನಡ ಜಾಗೃತಿ ಸಮಿತಿ ಸದಸ್ಯರಿಗೆ ಸೂಚಿಸಿದರು. ಕನ್ನಡ ಕಾಯಕ ವರ್ಷದಲ್ಲೇ ಕೊಡಗು ಜಇಲ್ಲೆಯಲ್ಲಿ ಗಡಿ ಉತ್ಸವ ಆಯೋಜಿಸುವ ಮೂಲಕ ಕನ್ನಡಕ್ಕೆ ಮತ್ತೊಂದು ಗರಿ ಮೂಡಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭ ಜಾಗೃತಿ ಸಮಿತಿಯ ಪ್ರಮುಖರಾದ ಎಸ್.ಮಹೇಶ್, ವಿರಾಜಪೇಟೆಯ ರಂಜಿತಾ ಕಾರ್ಯಪ್ಪ, ಕಾಜೂರು ಸತೀಶ, ಕುಶಾಲನಗರದ ಇ.ರಾಜು, ಭಾರತಿ ರಮೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ದರ್ಶನ ಉಪಸ್ಥಿತರಿದ್ದರು.

error: Content is protected !!