ವಿರಾಜಪೇಟೆಯ ಸೆಂಟ್ ಆನ್ಸ್ ಕಾಲೇಜಿನಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿ ಕೋರ್ಸ್ ಪ್ರಾರಂಭ

January 29, 2021

ವಿರಾಜಪೇಟೆ, ಜ.29: ಶಿಕ್ಷಣ ಕ್ಷೇತ್ರದಲ್ಲಿ ತನ್ನದೆಯಾದ ಛಾಪನ್ನು ಮೂಡಿಸಿರುವ ಕೊಡಗಿನ ಹೆಸರಾಂತ ವಿರಾಜಪೇಟೆಯ ಸೆಂಟ್ ಆನ್ಸ್ ಕಾಲೇಜಿನಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿ ಕೋರ್ಸ್‍ನ್ನು ಪ್ರಾರಂಭಿಸಲಾಗಿದೆ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆ.ಫಾ.ಮದಲೈಮುತ್ತು ಹೇಳಿದರು.
ಪತ್ರಿಕಾ ಹೇಳಿಕೆ ನೀಡಿದ ಅವರು, ಸ್ನಾತಕೋತ್ತರ ತರಗತಿ ಪ್ರಾರಂಭದಿಂದ ಸಂಸ್ಥೆಯು ಹೊಸ ಹೆಜ್ಜೆಯನ್ನು ಇಟ್ಟಂತಾಗಿದೆ. ಸಂತ ಅನ್ನಮ್ಮ ವಿದ್ಯಾಸಂಸ್ಥೆಯು ಈ ಹಿಂದಿನಿಂದಲೂ ಶಿಕ್ಷಣದಲ್ಲಿ ತನ್ನದೆಯಾದ ಕೊಡುಗೆಯನ್ನು ಸಲ್ಲಿಸುತ್ತಿದೆ. ಪ್ರಾಥಮಿಕ ಶಿಕ್ಷಣ, ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಮೂಲಕ ಶಿಕ್ಷಣ ಪ್ರಿಯರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು. ಫಲಿತಾಂಶದಲ್ಲಿ ಕಾಲೇಜು ಜಿಲ್ಲಾಮಟ್ಟದಲ್ಲಿ ಸಾಧನೆಯನ್ನು ತೋರಿದ್ದು ಗಮನಾರ್ಹ ಎಂದರು.
ಪದವಿ ಕಾಲೇಜು ನ್ಯಾಕ್ ಮೌಲ್ಯಾಂಕಣಕ್ಕೂ ಒಳಪಟ್ಟಿರುತ್ತದೆ. ವಿದ್ಯಾಸಂಸ್ಥೆಯು ಸಮಾಜಕ್ಕೆ ತನ್ನದೆಯಾದ ಕೊಡುಗೆ ನೀಡುತ್ತಾ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿದೆ. ಸಂಸ್ಥೆ ವತಿಯಿಂದ ಶಿಕ್ಷಣ ಮಾತ್ರವಲ್ಲದೆ ಕ್ರೀಡೆ, ಎನ್‍ಸಿಸಿ, ಸ್ಕೌಟ್ ಗೈಡ್ಸ್, ಎನ್‍ಎಸ್‍ಎಸ್ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದು, ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಯಾವುದೇ ಜಾತಿ, ಮತ, ಧರ್ಮ, ಭಾಷೆಗಳ ಭೇದವಿಲ್ಲದೆ ಸಮಾನ ಶಿಕ್ಷಣವನ್ನು ನೀಡಲಾಗುತ್ತಿದೆ.
ಇದೀಗ ಈ ಶೈಕ್ಷಣಿಕ ಸಾಲಿನಲ್ಲಿ ನೂತನವಾಗಿ ಎಂ.ಕಾಂ. ಸ್ನಾತಕೋತ್ತರ ಪದವಿ ಕೋರ್ಸ್‍ನ್ನು ಪ್ರಾರಂಭಿಸಲಾಗಿದೆ. ನೂತನ ಸ್ನಾತಕೋತ್ತರ ಕೋರ್ಸ್ ಪ್ರಾರಂಭದಿಂದ ವಿರಾಜಪೇಟೆಯ ಸುತ್ತಮುತ್ತಲ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ನುರಿತ ಅನುಭವಿ ಉಪನ್ಯಾಸಕರು, ಸುಸಜ್ಜಿತ ಕೊಠಡಿ ಮುಂತಾದ ಸೌಲಭ್ಯಗಳಿದ್ದು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಎಲ್ಲಾ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಮತ್ತು ಪ್ರವೇಶಾತಿಗೆ ವಿದ್ಯಾರ್ಥಿಗಳು ಕಾಲೇಜು ಕಚೇರಿಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

error: Content is protected !!