ಕೊಡಗು ಕಸಾಪ ಸುವರ್ಣ ಸಂಭ್ರಮ- ಸಾಹಿತ್ಯ ಸಮ್ಮೇಳನ : ಭಾಷೆ ಕಲಿಸಿ ಕನ್ನಡ ಉಳಿಸಿ : ಸಮ್ಮೇಳನಾಧ್ಯಕ್ಷೆ ಮಂಡೇಪಂಡ ಗೀತಾ ಮಂದಣ್ಣ ಕರೆ

January 29, 2021

ಮಡಿಕೇರಿ ಜ.29 : ಕನ್ನಡದ ಜನರು ವಿಶಾಲ ಮನಸ್ಸಿನವರು, ಅವರು ಯಾವುದೇ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು. ಆದರೆ ಕನ್ನಡವನ್ನು ಇತರ ಭಾಷಿಕರಿಗೆ ಕಲಿಯುವಂತೆ ಪ್ರೇರೇಪಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ನಮ್ಮಲ್ಲಿ ಕಲಿಸುವ ಪ್ರಯತ್ನವಿಲ್ಲದೆ, ಕಲಿಯುವವರಿಲ್ಲದೆ ಕರ್ನಾಟಕದಲ್ಲಿ ಇಂದು ಕನ್ನಡ ಮಾಯವಾಗುತ್ತಿದೆ ಎಂದು ಕೊಡಗು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಮಂಡೇಪಂಡ ಗೀತಾಮಂದಣ್ಣ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕಾವೇರಿ ಹಾಲ್‍ನ ರಾವ್ ಬಹದ್ದೂರು ಮುತ್ತಣ್ಣ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದು ರಾಜ್ಯದ ರಾಜಧಾನಿ ಬೆಂಗಳೂರು, ದಿನೇ ದಿನೇ ಕನ್ನಡಿಗರು ಅಚ್ಚರಿಪಡುವಷ್ಟು ಕನ್ನಡತನವನ್ನು ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತ್ಯಕ್ಕೆ ಸಮಾಜದಲ್ಲಿ ಪರಿವರ್ತನೆ ತರುವ ಸಾಮಥ್ರ್ಯ, ಸಮಾಜದ ಸಂಘಟನೆಯನ್ನು ಬಲಪಡಿಸುವ ಶಕ್ತಿ ಹಾಗೂ ದೇಶಪ್ರೇಮದ ಕಿಚ್ಚೆಬ್ಬಿಸುವ ಸಾಮಥ್ರ್ಯವಿದ್ದು, ಅದರು ಸಮಾಜಕ್ಕೆ ಹಿಡಿದ ಕನ್ನಡಿಯಂತಿರಬೇಕು ಎಂದು ಸಾಹಿತಿ, ಕನ್ನಡಿಯಲ್ಲಿ ನಾವು ನಮ್ಮ ಓರೆ-ಕೋರೆಗಳನ್ನು ನೀಡಿ ತಿದ್ದಿಕೊಳ್ಳುವಂತೆ ಸಾಹಿತ್ಯ ಕೂಡಾ ಸಮಾಜವನ್ನು ತಿದ್ದುವಂತಿರಬೇಕು. ಅದು ಸಮಾಜದ ಸಾಂಸ್ಕøತಿಕ, ರಾಜನೈತಿಕ, ವೈಜ್ಞಾನಿಕ ಆಗುಹೋಗುಗಳ ಪ್ರತಿಬಿಂಬವಾಗಿರಬೇಕು ಎಂದು ಹೇಳಿದರು.
ಸಾಹಿತ್ಯ ಭಾಷೆಯ ಬೆಳವಣಿಗೆಗೆ ಪೂರಕವಾಗಿರಬೇಕು. ಇಲ್ಲದಿದ್ದಲ್ಲಿ ಕೇವಲ ಶಬ್ಧ ಜಾಲದಿಂದ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿದ ಅವರು, ಸಾಹಿತ್ಯ ಸಮ್ಮೇಳನಗಳು ಕನ್ನಡದ ಪ್ರಚಾರಕ್ಕಾಗಿ ಭಾಷೆಯಯನ್ನು ಸಮೃದ್ಧಿಗೊಳಿಸುವುದಕ್ಕಾಗಿ ಒಟ್ಟಾಗಿ ಚಿಂತಿಸುವ ವೇದಿಕೆಯಾಗಬೇಕು ಎಂದು ಆಶಿಸಿದರು.
ಕೊಡಗಿನಲ್ಲಿ ಅನೇಕ ಕನ್ನಡದ ಕವಿಗಳು, ಕಾದಂಬರಿಕಾರರು, ಪ್ರಬಂಧ ನಾಟಕಕಾರರು, ಜಾನಪದ ಸಾಹಿತಿಗಳಿದ್ದು, ಅವರಲ್ಲಿ ಪ್ರತಿಭೆಗಳಿದ್ದರೂ ಎಲೆಮರೆಯ ಕಾಯಿಯಂತಿದ್ದಾರೆ. ಅವರಿಗೆ ಅವರ ಸಾಹಿತ್ಯ ಕೃಷಿಗೆ ಮತ್ತು ಕೃತಿಗಳಿಗೆ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ವಿಷಾದಿಸಿದ ಗೀತಾ ಮಂದಣ್ಣ ಅವರು, ಕನ್ನಡದ ಲೇಖಕರನ್ನು ಪ್ರೋತ್ಸಾಹಿಸಲು ಅವರ ಕೃತಿಗಳನ್ನು ಖರೀದಿಸಲು ಕನ್ನಡ ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಇಲಾಖೆಗಳಿದ್ದರೂ, ಅವುಗಳಿಗೆ ಸರಕಾರದ ಸಹಾಯಧನದ ಸೌಲಭ್ಯವಿದ್ದರೂ, ಈ ಸಂಸ್ಥೆಗಳು ಇದುವರೆಗೂ ಕೊಡಗಿನ ಲೇಖಕರ ಕೃತಿಗಳನ್ನು ಖರೀದಿಸಿದ ಉದಾಹರಣೆಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮನೆಯಲ್ಲಿ ಮೊದಲು ನಮ್ಮ ಮಾತೃಭಾಷೆಗೆ ಪ್ರಾಧಾನ್ಯತೆ ನೀಡಬೇಕು. ನಂತರ ಸ್ಥಳೀಯ ಮತ್ತು ರಾಷ್ಟ್ರಭಾಷೆಗಳು ಬರಬೇಕು. ನಾವು ಯಾವುದೇ ಭಾಷೆ ಮಾತನಾಡಿದರೂ ಅದರಲ್ಲಿ ಶುದ್ಧತೆ ಇರಬೇಕು. ಒಂದು ವಾಕ್ಯದಲ್ಲಿ ಎರಡು ಕನ್ನಡ ಶಬ್ಧಗಳನ್ನಷ್ಟೇ ಬಳಸಿ ಆರು ಆಂಗ್ಲ ಪದಗಳನ್ನು ಸೇರಿಸಿ ಮಾತನಾಡುವುದರಿಂದ ಕನ್ನಡದ ಬೆಳವಣಿಗೆಯಾಗುವುದಿಲ್ಲ. ಇದರಿಂದಾಗಿಯೇ ನಾವು ಬ್ರಿಟೀಷರ ಗುಲಾಮರಾಗಿದ್ದೆವು ಎಂದು ನೆನಪಿಸಿದರು.
ಮೇಲಿಂದ ಮೇಲೆ ಪ್ರಕೃತಿ ವಿಕೋಪಕ್ಕೆ ಈಡಾಗುತ್ತಿರುವ ಕೊಡಗು ಅನೇಕ ಸಂಕಷ್ಟಗಳಿಂದ ನಲುಗಿಹೋಗುತ್ತಿದೆ. ಕಾಡು ಪ್ರಾಣಿಗಳ ಹಾವಳಿ, ಬೆಳೆದ ಬೆಳೆ ಕೈಸೇರದೆ ಕಂಗೆಟ್ಟ ರೈತರು, ಕರಿಮೆಣಸಿಗೆ ಬೆಲೆಯಿಲ್ಲದೆ ಬೆಳೆಗಾರ, ಕಾರ್ಮಿಕರ ಕೊರತೆ, ಋತುಮಾನಕ್ಕೆ ಸರಿಯಾಗಿ ಮಳೆಯಾಗದೆ ಅಕಾಲಿಕ ಮಳೆಯಿಂದ ಬೆಳೆಗಳಿಗೆ ತೊಂದರೆ ಮುಂತಾದವುಗಳಿಂದಾಗಿ ರೈತ ಆತ್ಮಹತ್ಯೆಗೆ ಶರಣಾಗುವಂತಾಗಿದೆ. ಇದರೊಂದಿಗೆ ಹತ್ತುಹಲವು ಸಮಸ್ಯೆಗಳು ಕೊಡಗಿನ ಜನತೆಯನ್ನು ಕಾಡುತ್ತಿದ್ದು, ಈ ಸಮಸ್ಯೆಗಳನ್ನು ಬಗೆಹರಿಸಿ ಕೊಡಗನ್ನು ವಿವಾದ ಮುಕ್ತವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಮೇಲಿರುವ ಬಹು ದೊಡ್ಡ ಜವಾಬ್ದಾರಿಯಾಗಿದೆ ಎಂದೂ ಅವರು ಕರೆ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಕನ್ನಡ ಹಾಗೂ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗಾಗಿ ಶ್ರಮಿಸಿದವರನ್ನು ಇದೇ ಸಂದರ್ಭ ಸ್ಮರಿಸಿದ ಅವರು, ಪುಟ್ಟದಾದ ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, 14 ಜಿಲ್ಲಾ ಸಾಹಿತ್ಯ ಸಮ್ಮೇಳನ, 20ಕ್ಕೂ ಅಧಿಕ ತಾಲೂಕು ಸಾಹಿತ್ಯ ಸಮ್ಮೇಳನಗಳಾಗಿರುವುದು ಕೊಡಗಿನವರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದೆ ಎಂದು ಗೀತಾ ಮಂದಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜಿಲ್ಲೆಯಲ್ಲಿ ಇನ್ನೂ ಅನೇಕ ಕನ್ನಡ ಸುಧಾರಣಾ ಕಾರ್ಯಕ್ರಮಗಳು ಆಗಬೇಕಿದೆ. ಇದಕ್ಕಾಗಿ ಸರಕಾರದಿಂದ ಮತ್ತಷ್ಟು ಅನುದಾನ ಬಿಡುಗಡೆಯಾಗಬೇಕಿದೆ. ತಾಲೂಕು ವ್ಯಾಪ್ತಿಗಳಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಕಲಿಯಲು ಮತ್ತು ಮಾತನಾಡಲು ಪ್ರೋತ್ಸಾಹಿಸಬೇಕಿದೆ. ಕನ್ನಡದಲ್ಲಿ ಸಣ್ಣ ಕತೆ, ಕವನ, ಪ್ರಬಂಧಗಳನ್ನು ಬರೆಸಿ ಬಹುಮಾನಗಳನ್ನು ನೀಡುವ ವ್ಯವಸ್ಥೆಯಾಗಬೇಕು. ಅಂಗಡಿ ಮುಂಗಟ್ಟುಗಳಿಂದ ಹಿಡಿದು ಸರಕಾರಿ ಕಚೇರಿಗಳವರೆಗೆ ಎಲ್ಲಾ ಕಡೆಗಳಲ್ಲಿ ಕನ್ನಡ ನಾಮಫಲಕಗಳು ಗೋಚರಿಸಬೇಕು. ನ್ಯಾಯಾಲಯಗಳ ತೀರ್ಪುಗಳ ಸಹಿತ ಎಲ್ಲಾ ವ್ಯವಹಾರಗಳು ಕನ್ನಡದಲ್ಲಿರಬೇಕು. ಕನ್ನಡ ಸಮ್ಮೇಳನಗಳು ಕೇವಲ ಉತ್ಸವಗಳಾಗದೆ ಕನ್ನಡಿಗರ ಕನ್ನಡ ಪ್ರಸಾರ ಯಾತ್ರಗಳಾಗಬೇಕು. ಕನ್ನಡದ ಸಾಹಿತಿಗಳು ಸನ್ಮಾನಕ್ಕಾಗಿ, ಗೌರವಕ್ಕಾಗಿ ಅರ್ಜಿ ಹಾಕುವ ಪದ್ಧತಿ ನಿಲ್ಲಬೇಕು. ಬದಲಾಗಿ ಸ್ಥಳೀಯ ಸಂಸ್ಥೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತಿಗಳ ಅರ್ಹತೆ ಮೇರೆಗೆ ಆಯ್ಕೆ ಮಾಡುವಂತಿರಬೇಕು ಎಂದೂ ಗೀತಾ ಮಂದಣ್ಣ ಸಲಹೆ ಮಾಡಿದರು.

error: Content is protected !!