ಪಯ್ಯಾವೂರ್ ಕ್ಷೇತ್ರದಲ್ಲಿ ಫೆ.11 ರಿಂದ 27ರ ವರೆಗೆ ‘ಊಟ್ ಮಹೋತ್ಸವ’

January 29, 2021

ಮಡಿಕೇರಿ ಜ.29 : ಕೇರಳದ ಕಣನೂರು ಜಿಲ್ಲೆಯ ಪಯ್ಯಾವೂರ್ ಕಿರಾತಮೂರ್ತಿ ಕ್ಷೇತ್ರದಲ್ಲಿ ಫೆ.11 ರಿಂದ 27ರ ವರೆಗೆ ‘ಊಟ್ ಮಹೋತ್ಸವ’ವನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಗುವುದೆಂದು ಕ್ಷೇತ್ರದ ಕಾರ್ಯನಿರ್ವಾಹಕ ಅಧಿಕಾರಿ ಸಿ.ವಿ.ಗಿರೀಶ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಪಯ್ಯಾವೂರ್ ಕಿರಾತ ಮೂರ್ತಿ ಕ್ಷೇತ್ರದಲ್ಲಿ 2021ನೇ ಊಟ್ ಮಹೋತ್ಸವದಲ್ಲಿ ಪವಿತ್ರವಾದ ಆಚಾರ ಅನುಷ್ಠಾನಗಳಿಂದ ಕಾಣಿಕೆ ವಸ್ತುಗಳನ್ನು ದೇವರ ಸ್ಥಾನದಲ್ಲಿ ಸಮರ್ಪಿಸುವುದು ಈ ಸ್ಥಳದ ವಿಶೇಷವಾಗಿದೆ. ಕೇರಳ, ಕರ್ನಾಟಕ (ಕೊಡಗು) ಸಂಬಂಧವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಪೌರಾಣಿಕ ಕಾಲದಿಂದಲೂ ದೇವರಿಗೆ ಕಾಣಿಕೆ ಕೊಡಲಾಗುತ್ತಿದೆ. ಅಂದು ಕೊಡಗಿನಲ್ಲಿರುವ ಭಕ್ತಾದಿಗಳು ಎತ್ತು ಪೆÇೀರಾಟ ಮಹೋತ್ಸವಕ್ಕೆ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.
ಕ್ಷೇತ್ರದ ಟ್ರಸ್ಟಿ ಮುಂಡ್ಯೋಳಂಡ ಸದಾ ಚಿಣ್ಣಪ್ಪ ಮಾತನಾಡಿ, ಫೆ. 11 ರಿಂದ 27ರ ವರೆಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಎಡವಲತ್ ಪುಡಯೂರ್ ಮನೈಕಲ್ ಕುಬೇರನ್ ನಂಬೂದಿರಿಪಾಡ್ ರವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಫೆ.11 ರಂದು ಜಿಲ್ಲೆಯ ಬೊವ್ವೆರಿಯಂಡ ಮತ್ತು ಮುಂಡ್ಯೋಳಂಡ ಕುಟುಂಬದಿಂದ ಕ್ಷೇತ್ರಕ್ಕೆ ಅಕ್ಕಿ ನೀಡುವ ಮೂಲಕ ಮಹೋತ್ಸವ ಆರಂಭವಾಗಲಿದ್ದು, ಫೆ. 12 ರಂದು ಬೆಳಗ್ಗೆ 10 ಗಂಟೆಗೆ ಚೂಳಿಯಾಡ್ ಊರಿನವರ ಓಲ ಕಾಯ್ದ ನಡೆಯಲಿದೆ. ಸಂಜೆ 5 ಗಂಟೆಗೆ ಮೆರವಣಿಗೆಯೊಂದಿಗೆ ತಿಡಂಬೆಳುನಳ್ಳತ್, 5.30 ಕ್ಕೆ ಪಯ್ಯಾವೂರು ಮತ್ತು ಕೈದಪ್ರಂ ಗ್ರಾಮಸ್ಥರಿಂದ ಊಟ್ ಪ್ರದರ್ಶನ, 6.30ಕ್ಕೆ ಭೂತ ಬಲಿ ನಡೆಯಲಿದೆ.
ಫೆ. 13 ರಿಂದ 20ರ ವರೆಗೆ ಸಂಜೆ 5 ಗಂಟೆಗೆ ದೇವರ ದರ್ಶನ, 6.30ಕ್ಕೆ ಭೂತಬಲಿ ಜರುಗಲಿದೆ. ಫೆ. 21 ರಂದು ಬೆಳಿಗ್ಗೆ 6 ಗಂಟೆಗೆ ದೇವರಿಗೆ ಭಕ್ತಾಧಿಗಳಿಂದ ಅಕ್ಕಿ ಸಮರ್ಪಣೆ, 7 ಗಂಟೆಗೆ ಎತ್ತುಗಳ ಪ್ರದಕ್ಷಿಣೆ, ಸಂಜೆ 5 ಗಂಟೆಗೆ ದೇವರ ದರ್ಶನ, 7 ಗಂಟೆಗೆ ಚೇಡಿಚೇರಿ ಗ್ರಾಮಸ್ಥರ ಊಟ್ ಪ್ರದರ್ಶನ, ರಾತ್ರಿ 8 ಗಂಟಗೆ ತೈಯ್ಯಾಂಪಾಡಿ ಪಾಟ್, 8.30ಕ್ಕೆ ಕೊಡವರ ದುಡಿಕೊಟ್ಟ್ ಪಾಟ್, 9 ಗಂಟೆಗೆ ಶ್ರೀ ಭೂತ ಬಲಿ ನಡೆಯಲಿದೆ ಎಂದರು.
ಫೆ.22 ರಂದು ಬೆಳಿಗ್ಗೆ 4 ಗಂಟೆಗೆ ನೈ ಅಮೃತಂ, 6 ಗಂಟೆಗೆ ಆಲಿಂಗನ ಪುಷ್ಪಾರ್ಚನೆ, ಅಶ್ವಮೇದ ನಮಸ್ಕಾರ, ಸಾಳಗ್ರಾಮ ಪೂಜೆ, ವಾದ್ಯಗೋಷ್ಠಿಯೊಂದಿಗೆ ದೇವರ ಪ್ರದರ್ಶನ, ಪುಷ್ಪಾಂಜಲಿ ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ದೇವರ ಮೂರ್ತಿಯ ಮೆರವಣಿಗೆ, ಕೋಮರತಚ್ಚ ಮತ್ತು ನೆಯ್ಯಮೃತದವರ ಕುಯಿಯಡುಪ್ಪಿಲ್ ನೃತ್ತ, 2.30ಕ್ಕೆ ಚೊಳಿಯಾಡ್ ಗ್ರಾಮಸ್ಥರ ಓಮನ ಕಾಯಿಚ್ಛ, ಸಂಜೆ 3 ಗಂಟೆಗೆ ಕೊಡವರ ಯಾತ್ರೆ ಹಾಗೂ ರಾತ್ರಿ 8 ಗಂಟೆಗೆ ಭೂತ ಬಲಿ ಜರುಗಲಿದೆ.
ಫೆ. 23 ರಂದು ಬೆಳಿಗ್ಗೆ 11 ಗಂಟೆಗೆ ನೈಯಾಟ್, ಎಳನೀರಾಟ್, ಕಳಭಾಟಂ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಅಡಿಯಿಲೂಣ್, ಸಂಜೆ 6 ಗಂಟೆಗೆ ಭೂತಬಲಿ, 8 ಗಂಟೆಗೆ ದೇವರ ದರ್ಶನ, ರಾತ್ರಿ 9 ಗಂಟೆಗೆ ತೈಯಂಪಾಡಿ ಪಾಟ್ ನಡೆಯಲಿದೆ. ಫೆ. 24 ರಂದು 11 ಗಂಟೆಗೆ ದೇವರ ಮೂರ್ತಿಯ ಆರಾಟ್ ಎಳುನಳ್ಳತ್ತ್, ಮೆರವಣಿಗೆ, ಸಂಜೆ 6 ಗಂಟೆಗೆ ಭೂತ ಬಲಿ, ರಾತ್ರಿ 9 ಗಂಟೆಗೆ ತೈಯಂಪಾಡಿ ಪಾಟ್ ನಡೆಯಲಿದೆ.
ಫೆ. 25 ರಂದು ರಾತ್ರಿ 8 ಗಂಟೆಗೆ ಪಯಶ್ಚಿ ಭಗವತಿ ಕ್ಷೇತ್ರ ಕಳಶ, 26 ರಂದು ರಾತ್ರಿ 8 ಗಂಟೆಗೆ ಮಡತ್ತಿಲ್ ಕಳಶ, 27 ರಂದು ರಾತ್ರಿ 8 ಗಂಟೆಗೆ ಮಾಂಗಾಡನ್ ವಯನ್ ಕಳಸ ನಡೆಯಲಿದೆ ಎಂದರು.
ಬೊವ್ವೆರಿಯಂಡ ರಮೇಶ್ ಅಪ್ಪಯ್ಯ ಮಾತನಾಡಿ, ವರ್ಷಂಪ್ರತಿ ನಡೆಯುವ ಆನೆ ಅಂಬಾರಿ ಮತ್ತು ಅನ್ನದಾನ ಇರುವುದಿಲ್ಲ. ಅಲ್ಲದೇ ದೊಡ್ಡ ಅರಕೆ ಪಾಯಸ (ಬೆಲಕು ಪಾಯಸ)ವನ್ನು ಈ ಭಾರಿ ನಿಷೇಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಕಾರ್ಯದರ್ಶಿ ಫಲ್ಗುಣನ್ ಮೇಲೇಡತ್, ಟ್ರಸ್ಟಿ ಬೊವ್ವೆರಿಯಂಡ ನಂದ ಮುತ್ತಪ್ಪ ಹಾಗೂ ಬೊವ್ವೆರಿಯಂಡ ಕುಟುಂಬದ ತಕ್ಕ ಮುಖ್ಯಸ್ಥ ಸಾಬೂ ತಿಮ್ಮಯ್ಯ ಉಪಸ್ಥಿತರಿದ್ದರು.

error: Content is protected !!