ಕಕ್ಕಬ್ಬೆಯಲ್ಲಿ “ಕೊಡಗು ವೆಟರೆನ್ಸ್ ಹಾಕಿ ಕಪ್” ಪಂದ್ಯಾವಳಿ

January 29, 2021

ಮಡಿಕೇರಿ ಜ.29 : ಹಿರಿಯ ಹಾಗೂ ಕಿರಿಯ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಕ್ಕಬ್ಬೆಯ ಸ್ಕೀ ಫೌಂಡೇಶನ್ ವತಿಯಿಂದ “ಕೊಡಗು ವೆಟರೆನ್ಸ್ ಹಾಕಿ ಕಪ್” ಪಂದ್ಯಾವಳಿಯನ್ನು ಮಾರ್ಚ್ ತಿಂಗಳಿನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಜಂಟಿ ನಿರ್ದೇಶಕ ಬೊಳಿಯಾಡಿರ ಸಂತು ಸುಬ್ರಮಣಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 40 ವರ್ಷ ಮೇಲ್ಪಟ್ಟ ಹಿರಿಯ ಕ್ರೀಡಾಪಟುಗಳ ಆರೋಗ್ಯದ ದೃಷ್ಠಿಯಿಂದ ಹಾಗೂ 15 ವರ್ಷ ಮೇಲ್ಪಟ್ಟ ಯುವಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕ್ರೀಡಾ ಕೂಟವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಕ್ಕಬ್ಬೆಯ ಪ್ರೌಢಶಾಲೆ ಮೈದಾನದಲ್ಲಿ ಐದು ದಿನಗಳ ಕಾಲ ಪಂದ್ಯಾವಳಿ ನಡೆಸಲು ನಿರ್ಧರಿಸಲಾಗಿದ್ದು, ಮಾರ್ಚ್ ತಿಂಗಳ 20ರ ನಂತರ ದಿನಾಂಕವನ್ನು ನಿಗದಿಪಡಿಸಲಾಗುವುದೆಂದರು.
ಕೊಡಗಿನ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಒಂದು ಗ್ರಾಮದಿಂದ ಒಂದು ತಂಡಕ್ಕೆ ಮಾತ್ರ ಅವಕಾಶ ನೀಡಲಾಗುವುದು. ಪಂದ್ಯವಾಳಿಯಲ್ಲಿ ವಿಜೇತ ತಂಡಕ್ಕೆ ಆಕರ್ಷಕ ಬಹುಮಾನ ನೀಡಲಾಗುವುದು. ಆಸಕ್ತ ಹಿರಿಯ ಕ್ರೀಡಾಪಟುಗಳು ರೂ. 3,500ಗಳನ್ನು ಪಾವತಿಸಿ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9902613254, 9632400753 ಸಂಪರ್ಕಿಸಬಹುದಾಗಿದೆ.
ಸಂಚಾಲಕ ಅಪ್ಪರಂಡ ಸಾಗರ್ ಗಣಪತಿ ಮಾತನಾಡಿ, ಕೊಡಗಿನ ಕಕ್ಕಬ್ಬೆಯಲ್ಲಿ ಅತೀ ಹೆಚ್ಚು ಮಳೆ ಬರುವುದರಿಂದ ಮೂರು ತಿಂಗಳ ಕಾಲ 40 ವರ್ಷದ ಮೇಲ್ಪಟ್ಟ ಹಿರಿಯರು ತಮ್ಮ ಆರೋಗ್ಯದ ಕಡೆ ಗಮನಹರಿಸದೆ ನಿರ್ಲಕ್ಷ್ಯ ಮನೋಭವನೆಯನ್ನು ಹೊಂದಿರುತ್ತಾರೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಆದ್ದರಿಂದ 40 ವರ್ಷ ಮೇಲ್ಪಟ್ಟ ಹಿರಿಯರಿಗೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕ್ರೀಡಾಪಟುಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಮಾದಂಡ ಉಮೇಶ್ ಬಿದ್ದಪ್ಪ, ಖಜಾಂಚಿ ನಾಟೋಳಂಡ ಶಂಭು ಕರುಂಬಯ್ಯ ಉಪಸ್ಥಿತರಿದ್ದರು.

error: Content is protected !!